ಕ್ರೀಡೆ

ಬ್ಯಾಡ್ಮಿಟನ್: ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿ ಕ್ವಾರ್ಟರ್‌ಗೆ ಸೈನಾ, ಕಶ್ಯಪ್‌

ಕೌಲಾಲಂಪುರ(ಜ.17): ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಸೈನಾ ನೆಹ್ವಾಲ್‌ ಹಾಗೂ ಅವರ ಪತಿ ಪಿ.ಕಶ್ಯಪ್‌ ಇಲ್ಲಿ ಬುಧವಾರದಿಂದ ಆರಂಭಗೊಂಡಿರುವ ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಭಾರತದ ಮತ್ತೊಬ್ಬ ತಾರಾ ಆಟಗಾರ ಕಿದಂಬಿ ಶ್ರೀಕಾಂತ್‌ ಕೂಡಾ ಶುಭಾರಂಭ ಮಾಡಿದ್ದು, 2ನೇ ಸುತ್ತಿಗೇರಿದ್ದಾರೆ.

ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ, ಹಾಂಕಾಂಗ್‌ನ ಜಾಯ್‌ ಕ್ಸುವಾನ್‌ ಡೆಂಗ್‌ರನ್ನು 14-21, 21-18, 21-18 ಗೇಮ್‌ಗಳಲ್ಲಿ ಸೋಲಿಸಿದರು. ಸೈನಾ 2ನೇ ಸುತ್ತಿನಲ್ಲಿ ಹಾಂಕಾಂಗ್‌ನ ಪಯ್‌ ಯಿನ್‌ ಯಿಪ್‌ರನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್‌, ಹಾಂಕಾಂಗ್‌ನ ಅಂಗಸ್‌ ಕಾ ಲಾಂಗ್‌ರನ್ನು 21-17, 21-11 ನೇರ ಗೇಮ್‌ಗಳಿಂದ ಪರಾಭವಗೊಳಿಸಿದರು. ಶ್ರೀಕಾಂತ್‌ 2ನೇ ಸುತ್ತಿನಲ್ಲಿ ಹಾಂಕಾಂಗ್‌ನ ವಿನ್ಸೆಂಟ್‌ ವಿಂಗ್‌ರನ್ನು ಎದುರಿಸಲಿದ್ದಾರೆ. ಇದೇ ವೇಳೆ ಕಶ್ಯಪ್‌, ಡೆನ್ಮಾರ್ಕ್ನ ರಾಸ್ಮಸ್‌ ಗೆಮ್ಕೆಯನ್ನು 19-21, 21-19, 21-10 ಗೇಮ್‌ಗಳಲ್ಲಿ ಮಣಿಸಿ ಮುನ್ನಡೆದರು. ಕಶ್ಯಪ್‌ ಪಂದ್ಯದ ವೇಳೆ ಸೈನಾ ಕೋಚ್‌ ಆಗಿ ಕಾಣಿಸಿಕೊಂಡಿದ್ದು ವಿಶೇಷ.

ಮಹಿಳಾ ಡಬಲ್ಸ್‌ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ-ಎನ್‌.ಸಿಕ್ಕಿರೆಡ್ಡಿ ಹಾಂಕಾಂಗ್‌ನ ಯಾವ್‌ ಎನ್‌ಜಿ-ಸಿನ್‌ ಯಿಂಗ್‌ರನ್ನು 21-16, 22-20 ನೇರ ಗೇಮ್‌ಗಳಿಂದ ಸೋಲಿಸಿದರು. ಇದೇ ವೇಳೆ ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ-ಸಿಕ್ಕಿರೆಡ್ಡಿ ಜೋಡಿ ಸೋಲನುಭವಿಸಿತು. (ಎನ್.ಬಿ)

Leave a Reply

comments

Related Articles

error: