ಪ್ರಮುಖ ಸುದ್ದಿ

ಎಲ್ಲಾ ಧರ್ಮಗಳಿಗಿಂತ ಮಾನವೀಯ ಧರ್ಮ ದೊಡ್ಡದು : ರಾಜ್ಯಾಧ್ಯಕ್ಷ ಮೌಲಾನ ಮುಫ್ತಿ ಇಫ್ತಖಾರ್ ಅಹಮದ್ ಅಭಿಮತ

ರಾಜ್ಯ(ಮಡಿಕೇರಿ) ಜ.17 : – ಎಲ್ಲಾ ಧರ್ಮಗಳಿಗಿಂತ ಮಾನವೀಯ ಧರ್ಮ ದೊಡ್ಡದು, ಯಾರೇ ಸಂಕಷ್ಟಕ್ಕೆ ಸಿಲುಕಿದರೂ ನೋವಿಗೆ ಸ್ಪಂದಿಸುವ ಗುಣವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಜಮ್ಯಿತ್ ಉಲಮಾ ಎ ಯ ರಾಜ್ಯಾಧ್ಯಕ್ಷ ಮೌಲಾನ ಮುಫ್ತಿ ಇಫ್ತಖಾರ್ ಅಹಮದ್ ಕರೆ ನೀಡಿದ್ದಾರೆ.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜಮ್ಯಿತ್ ಉಲಾಮ-ಎ-ಬೆಂಗಳೂರು ಮತ್ತು ಮಡಿಕೇರಿ ಘಟಕದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಸಮಾವೇಶ ಮತ್ತು ಸಂತ್ರಸ್ತರಿಗೆ ಆರ್ಥಿಕ ನೆರವಿನ ಚೆಕ್ ವಿತರಿಸುವ ಕಾರ್ಯಕ್ರಮ ನಡೆಯಿತು.

ಸಂತ್ರಸ್ತರಿಗೆ ಚೆಕ್ ವಿತರಿಸಿ ಮಾತನಾಡಿದ ಅವರು ಹಿಂದು, ಮುಸ್ಲಿಂ ಕ್ರೈಸ್ತ ಅಥವಾ ಬೇರೆ ಯಾವುದೇ, ಜಾತಿ, ಧರ್ಮಗಳಿಗಿಂತ ಪ್ರಸ್ತುತ ದಿನಗಳಲ್ಲಿ ಮಾನವೀಯ ಧರ್ಮವೇ ಶ್ರೇಷ್ಠವೆನಿಸಿಕೊಂಡಿದೆ ಎಂದರು.

ದೇವರು ಪ್ರತಿಯೊಬ್ಬರಲ್ಲು ಮಾನವೀಯತೆ ಎಂಬ ಬೀಜವನ್ನು ಬಿತ್ತಿದ್ದಾನೆ, ಇದನ್ನು ಹೆಮ್ಮರವಾಗಿ ಬೆಳೆಸಿಕೊಂಡು ಸಂಕಷ್ಟದಲ್ಲಿರುವವರಿಗೆ ಬೆಳಕು ನೀಡುವ ಕಾರ್ಯವನ್ನು ಮಾಡಬೇಕಿದೆ. ಪ್ರಾಣಿಗಳಿಗೂ ಮಾನವೀಯತೆಯ ಅಂಶಗಳನ್ನು ನೀಡಲಾಗಿದೆ, ಆದರೆ ಅವುಗಳಿಗೆ ಜವಬ್ದಾರಿಗಳಿಲ್ಲ. ಮಾನವರಿಗೆ ತಮ್ಮದೇ ಆದ ಸಾಮಾಜಿಕ ಹೊಣೆಗಾರಿಕೆ ಇದ್ದು, ಒಗ್ಗಟ್ಟನ್ನು ಪ್ರತಿಪಾದಿಸುವ ಮಾರ್ಗದಲ್ಲಿ ಸಾಗಬೇಕೆ ಹೊರತು  ಕೋಮು, ಗಲಭೆಗಳನ್ನು ಸೃಷ್ಟಿಸಬಾರದು ಎಂದು ಮೌಲಾನ ಮುಫ್ತಿ ಇಫ್ತಖಾರ್ ಅಹಮದ್ ಕಿವಿಮಾತು ಹೇಳಿದರು.

ಪರಸ್ಪರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿ ಹೊಂದಾಣಿಕೆಯ ಬದುಕಿನಲ್ಲೇ ಸುಂದರ ಸಮಾಜವನ್ನು ನಿರ್ಮಿಸಬೇಕು. ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾತಿ, ಮತ, ಬೇಧವಿಲ್ಲದೆ ಪ್ರತಿಯೊಬ್ಬರಿಗೂ ಆರ್ಥಿಕ ನೆರವನ್ನು ನೀಡುವ ಕಾರ್ಯವನ್ನು ಜಮಾಯತ್ ಮಾಡುತ್ತಿದ್ದು, ಇನ್ನು ಮುಂದೆಯೂ ಕೊಡಗಿನ ಜನರ ಸಂಕಷ್ಟಗಳಿಗೆ ಸ್ಪಂದಿಸಲಿದೆ ಎಂದು ಮೌಲಾನ ಮುಫ್ತಿ ಇಫ್ತಖಾರ್ ಅಹಮದ್ ಭರವಸೆ ನೀಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಹಜರತ್ ಮೌಲಾನ ಮುಪ್ತಿ ಸಂಶೂದ್ಧಿನ್ ಮಾತನಾಡಿ, ಜಮ್ಯಿತ್ ಉಲಮಾ ಯಾವುದೇ ರಾಜಕೀಯ ಸಂಘಟನೆಯಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಸಂಸ್ಥೆಯಾಗಿದೆ. ಸಮಾಜದಲ್ಲಿ ಹಿಂದೂ, ಮುಸ್ಲಿಂ ಎನ್ನುವ ಭೇದ ಭಾವವಿಲ್ಲದೆ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಹುಟ್ಟು ಮತ್ತು ಸಾವಿನ ನಡುವಿನ ಜೀವನವನ್ನು ಶಾಂತಿ, ಸೌಹಾರ್ದತೆ, ಪರಸ್ಪರ ಪ್ರೀತಿಯಿಂದ ಕಳೆದಾಗ ಮಾತ್ರ ಬದುಕು ಸಾರ್ಥಕತೆಯನ್ನು ಹೊಂದಲು ಸಾಧ್ಯವೆಂದರು.

ಮಾನವೀಯ ನೆಲೆಗಟ್ಟಿನಲ್ಲಿ ಪ್ರತಿಯೊಬ್ಬರು ಮತ್ತೊಬ್ಬರ ಸಂಕಷ್ಟಕ್ಕೆ ಮಿಡಿಯುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಮೌಲಾನ ಮುಪ್ತಿ ಸಂಶೂದ್ಧಿನ್ ಕರೆ ನೀಡಿದರು.

ಉಪಾಧ್ಯಕ್ಷರಾದ ಜೈನುಲ್ಲಾ ಆಭಿದಿನ್ ರಶಾದಿ ಮುಜಹಿರಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭ ಭಾರತದಿಂದ ಬ್ರಿಟಿಷರನ್ನು ಓಡಿಸುವಲ್ಲಿ ನೆರವಾಗಿದೆ. ಸ್ವಾತಂತ್ರ್ಯ ನಂತರವು ಸಂಸ್ಥೆ ದೇಶದಲ್ಲಿ ಭಾವೈಕ್ಯತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಜಗತ್ತನ್ನು ಒಗ್ಗೂಡಿಸುವ ಪ್ರಯತ್ನಗಳು ಪ್ರತಿಯೊಬ್ಬರಿಂದ ಆಗಬೇಕೆ ಹೊರತು ಒಡೆಯುವ ಕೆಲಸವಾಗಬಾರದೆಂದರು

ಬದುಕಿರುವ ದಿನಗಳಲ್ಲಿ ಉತ್ತಮ ಕಾರ್ಯ ಮಾಡಿದರೆ, ಮರಣ ಹೊಂದಿದ ನಂತರವು ನಮ್ಮ ಹೆಸರು ಅಮರವಾಗಿರುತ್ತದೆ. ಆ ನಿಟ್ಟಿನಲ್ಲಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸಬೇಕು ಎಂದ ಅವರು,  ಯಾವುದೇ ಜಾತಿ, ಮತ, ಭೇದವಿಲ್ಲದೆ ಮಾನವೀಯ ಮೌಲ್ಯಗಳೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದರು.

ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಜಮಾಯತ್ ಸಂಸ್ಥೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲೂ ತನ್ನನ್ನು ತೊಡಗಿಸಿಕೊಂಡಿತ್ತು. ಭವ್ಯ ಪರಂಪರೆಯನ್ನು ಹೊಂದಿರುವ ಭಾರತಕ್ಕೆ ಅನೇಕ ಉಲಾಮಗಳು ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

ದೇಶದಲ್ಲಿ ಭಾವೈಕ್ಯತೆಯನ್ನು ಉಳಿಸುವ ಜವಬ್ದಾರಿ ಪ್ರತಿಯೊಬ್ಬ ನಾಗರೀಕನ ಮೇಲಿದೆ. ಪ್ರತಿಯೊಬ್ಬ ಮನುಷ್ಯ ಪ್ರತಿ ಕ್ಷಣದಲ್ಲೂ ಅನೇಕ ರೀತಿಯ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಜನರ ವಿಶ್ವಾಸ ಮತ್ತು ಪ್ರೀತಿ ಗಳಿಕೆಯ ಮೂಲಕ ಸಂಕಷ್ಟದ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸಬಹುದಾಗಿದೆ. ಇದನ್ನು ಮನಗಂಡು ಮುನ್ನಡೆಯಬೇಕೆ ಹೊರತು  ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವ ಕಾರ್ಯವನ್ನು ಯಾರೂ ಮಾಡಬಾರದು ಎಂದರು.

ತಾಳ್ಮೆ ಕಳೆದುಕೊಳ್ಳುವುದರಿಂದ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ, ಮುಂದಿನ ಯುವ ಪೀಳಿಗೆಗೆ ಶಾಂತಿ, ಸೌಹಾರ್ದತೆಯ ಸಮಾಜವನ್ನು ಉಡುಗೊರೆಯಾಗಿ ನೀಡಬೇಕಾಗಿದೆ ಎಂದು ಅಮೀನ್ ಮೊಹಿಸಿನ್ ತಿಳಿಸಿದರು.

ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಮಾತನಾಡಿ, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದ ಸಂದರ್ಭ ವಿವಿಧ ಸಂಘ, ಸಂಸ್ಥೆಗಳು ಹಾಗೂ ರಾಜ್ಯಗಳು ನೀಡಿದ ನೆರವನ್ನು ಪ್ರತಿಯೊಬ್ಬರೂ ಸ್ಮರಿಸಲೇಬೇಕಾಗಿದೆ ಎಂದರು. ಜಮಾಯತ್ ನ ಕಾರ್ಯ ಕೂಡ ಶ್ಲಾಘನೀಯವಾಗಿದ್ದು, ಸಂತ್ರಸ್ತರು ಎಲ್ಲಾ ನೆರವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ 180 ಸಂತ್ರಸ್ತರಿಗೆ ಚೆಕ್ ರೂಪದಲ್ಲಿ ಪರಿಹಾರ ಧನವನ್ನು ವಿತರಿಸಲಾಯಿತು. ಎಲ್ಲಾ ಜಾತಿ, ಜನಾಂಗದ ಸಂತ್ರಸ್ತರಿಗೂ ಧನ ಸಹಾಯ ಮಾಡಲಾಯಿತು. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂತ್ರಸ್ತರ ಪಟ್ಟಿಯನ್ನು ತಯಾರಿಸಿ ಆರ್ಥಿಕ ನೆರವು ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು.

ಜಮಾಯತ್ ಉಲಮಾ ಸಂಸ್ಥೆಯ ರಾಷ್ಟ್ರೀಯ ಸಮಿತಿ ಸದಸ್ಯ ನಸುರುಲ್ಲಾ ಷರೀಫ್, ಪ್ರಮುಖರಾದ ಎಂ.ಐ.ಅಕ್ಬರ್ ಪಾಷ, ಹಫೀಜ್ ರಿಯಾಜ್ ಅಹ್ಮದ್, ಮೌಲಾನ ಅಬ್ದುಲ್ ಹಕೀಂ, ಎಂ.ಕೆ.ಮನ್ಸೂರ್, ಹಾಫಿಜ್ ಇಸಾಕ್ ಅಹ್ಮದ್ ಮತ್ತಿತರರು ಹಾಜರಿದ್ದು ಚೆಕ್ ವಿತರಿಸಲು ನೆರವಾದರು.

ಮಡಿಕೇರಿ ತಾಲೂಕಿನ ವಿವಿಧ ಭಾಗಗಳ 300 ಕ್ಕೂ ಅಧಿಕ ಸಂತ್ರಸ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: