ಪ್ರಮುಖ ಸುದ್ದಿ

ಯೋಗ -ಧ್ಯಾನದಿಂದ ಉತ್ತಮ ವ್ಯಕ್ತಿತ್ವ ,ದೈಹಿಕ ಸದೃಢತೆ ಲಭಿಸುತ್ತದೆ : ಕೆ ಶಿವಪ್ರಸಾದ್

ರಾಜ್ಯ(ಮಡಿಕೇರಿ)ಜ.18:- ಆಧುನಿಕ ಜೀವನ ಶೈಲಿಯಿಂದ ಯುವಜನತೆಯು ಹಿಂದಿನ ಸಾಂಪ್ರದಾಯಿಕ ಜೀವನಕ್ರಮವನ್ನು ಮರೆಯುತ್ತಿದ್ದು ಪರಿಣಾಮವಾಗಿ ದೈಹಿಕ ಸದೃಢತೆಯನ್ನು ಕಳೆದುಕೊಳ್ಳುತ್ತಿದ್ದು ಯೋಗ ಹಾಗೂ ಧ್ಯಾನದಿಂದ ಉತ್ತಮ ವ್ಯಕ್ತಿತ್ವ ಮತ್ತು ದೈಹಿಕ ಸದೃಢತೆ ಲಭಿಸುತ್ತದೆ ಎಂದು ಮರಗೋಡು ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಕೆ ಶಿವಪ್ರಸಾದ್ ಅಭಿಪ್ರಾಯಪಟ್ಟರು.

ನೆಹರೂ ಯುವಕೇಂದ್ರ ಕೊಡಗು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟಗಳ ಆಶ್ರಯದಲ್ಲಿ ಹುಲಿತಾಳದ ಭಗತ್ ಯುವಕ ಸಂಘದ ವತಿಯಿಂದ ಸ್ಥಳೀಯ ಸಮುದಾಯಭವನದಲ್ಲಿ ವಿವೇಕಾನಂದ ಯುವ ಸಪ್ತಾಹದ ಅಂಗವಾಗಿ ಜರುಗಿದ ದೈಹಿಕ ಸದೃಢತೆಯ ದಿನಾಚರಣೆಯಲ್ಲಿ ಮುಖ್ಯ ಉಪನ್ಯಾಸವನ್ನು ನೀಡುತ್ತ ಮಾತನಾಡಿದರು. ಹಿಂದೆ ಪ್ರಕೃತಿಯಲ್ಲಿ ಒಂದಾಗಿ ಪ್ರಾಕೃತಿಕವಾಗಿ ಸಿಗುವ ಆಹಾರ ಸೇವನೆ,ನಿಸರ್ಗ ಸನಿಹವಾದ ಜೀವನ ಶೈಲಿಯನ್ನು ನಡೆಸುತ್ತಿದ್ದ ಜನರು ಉತ್ತಮ ಆರೋಗ್ಯವನ್ನು ಹೊಂದಿರುತ್ತಿದ್ದರು.ಇಂದಿನ ಜನರು ವ್ಯಾಯಾಮ ಹಾಗೂ ದೈಹಿಕ ಶ್ರಮದ ಕೆಲಸಗಳಿಂದ ದೂರವಾಗಿ ಕುರುಕಲು ಆಹಾರ ಪ್ರಿಯರಾಗಿ ಎಳೆಯ ಪ್ರಾಯದಲ್ಲಿಯೇ ದೈಹಿಕ ಸದೃಢತೆಯನ್ನು ಕಳೆದುಕೊಂಡು ಹೃದಯ,ಕಿಡ್ನಿ ಮೊದಲಾದ ಗಂಭೀರ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ,ಯುವ ಜನತೆಯು ಜಿಮ್ ಗೆ ಹೋಗುವುದರಿಂದ ಮಾತ್ರವೇ ಉತ್ತಮ ಆರೋಗ್ಯ ಹೊಂದಬಹುದೆಂಬ ಭ್ರಮೆಯಲ್ಲಿದೆ.ಇದರ ಹೊರತಾಗಿ ಪ್ರತಿ ನಿತ್ಯ ಬೇಗನೇ ಎದ್ದು ವ್ಯಾಯಾಮ,ವೇಗದ ನಡಿಗೆ,ಧ್ಯಾನವನ್ನು ರೂಢಿಸಿಕೊಳ್ಳಬೇಕು.ಉತ್ತಮ ಪೌಷ್ಟಿಕ ಆಹಾರ ಸೇವಿಸಿದಲ್ಲಿ ಸದೃಢ ಯುವಜನತೆ-ಸೃದೃಢ ಭಾರತ ನಿರ್ಮಾಣವಾಗುತ್ತದೆ, ದೈಹಿಕವಾಗಿ ಆರೋಗ್ಯವಾಗಿದ್ದರೆ ಮಾತ್ರವೇ ಮಾನಸಿಕ ನೆಮ್ಮದಿಯಿರಲು ಸಾಧ್ಯ ಎಂದು ಹೇಳಿದರು.

ಯುವಕ ಸಂಘದ ಗೌರವಾಧ್ಯಕ್ಷ ಪಿ.ಎಸ್ ರವಿಕñಷ್ಣ ಮಾತನಾಡುತ್ತಾ 1985 ರ ನಂತರ ಭಾರತದಲ್ಲಿ ಸ್ವಾಮಿ ವಿವೇಕಾನಂದರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ಯುವ ದಿನವೆಂದು ಘೋಷಿಸಲಾಗಿದ್ದು ಅವರ ವಿವಿಧ ವಿಚಾರಧಾರೆಗಳನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಯುಸಪ್ತಾಹವನ್ನು ಆಚರಿಸಲಾಗುತ್ತಿದೆ.ವಿವೇಕಾನಂದರು ಶಕ್ತಿಯೇ ಜೀವನ-ದುರ್ಬಲತೆಯೇ ಮರಣ ಎಂದು ಹೇಳಿದ್ದರು.ಆ ಹೇಳಿಕೆಯು ನಮ್ಮ ದೈಹಿಕ ಹಾಗೂ ಮಾನಸಿಕ ಪ್ರಬುದ್ಧತೆಯನ್ನು ಸಂಕೇತಿಸುತ್ತದೆ.ಜಾತಿ ವ್ಯವಸ್ಥೆಯ ವಿರೋಧಿಯಾಗಿದ್ದ ಅವರು ಜಾತಿಯೆಂಬ ಬಚ್ಚಲ ಕೊಚ್ಚೆಯನ್ನು ಕೆದಕಿದಷ್ಟೂ ಅದರ ದುರ್ವಾಸನೆ ಪರಿಸರವನ್ನೇ ಹದಗೆಡಿಸುತ್ತದೆ. ಇಂದಿನ ಯುವ ಜನತೆಯು ಜಾತಿಯ ಗೋಡೆಯನ್ನು ತೊಡೆದು ಹಾಕಿ ಐಕ್ಯತೆಯ ಮಂತ್ರವನ್ನು ಪಠಿಸಬೇಕಿದೆ.ಈ ಜಗತ್ತು ಎನ್ನುವುದು ನಮ್ಮನ್ನು ನಾವು ಗಟ್ಟಿಗೊಳಿಸಲೆಂದೇ ಇರುವ ವ್ಯಾಯಾಮ ಶಾಲೆ ಎಂಬ ವಿವೇಕವಾಣಿಯನ್ನು ಸ್ಮರಿಸಿ ಯುವ ಜನತೆಯು ಸದೃಢರಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಹಾಕತ್ತೂರು ಗ್ರಾಮ ಪಂಚಾಯತ್ ಸದಸ್ಯೆ ಹೆಚ್ ಪಿ ಪೂವಮ್ಮ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು.ಯುವಕ ಸಂಘದ ನಿಕಟಪೂರ್ವ ಅಧ್ಯಕ್ಷ ಪಿ ಎಂ  ಶರತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭಗತ್ ಯುವಕ ಸಂಘದ ಅಧ್ಯಕ್ಷ ಹೆಚ್ ಎಸ್ ವಿನೋದ್ , ಕಾರ್ಯದರ್ಶಿ ಹೆಚ್ ನಂದಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: