ಪ್ರಮುಖ ಸುದ್ದಿ

ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿ ವಿಶೇಷ ಭತ್ಯೆಗಳನ್ನು ನೀಡಲು ಒತ್ತಾಯಿಸಿ ಪ್ರತಿಭಟನೆ

ರಾಜ್ಯ(ಮಂಡ್ಯ)ಜ.19:- ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕಳೆದ 20ವರ್ಷಗಳಿಂದ ಮಂಡ್ಯ  ಪುರಸಭೆಯಲ್ಲಿ ಹಂಗಾಮಿ ನೌಕರರಾಗಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿ ವಿಶೇಷ ಭತ್ಯೆಗಳನ್ನು ನೀಡಬೇಕು ಎಂದು ಒತ್ತಾಯಿಸಿ ಪೌರಕಾರ್ಮಿಕರು ಇಂದು ತಮ್ಮ ಸ್ವಚ್ಛತಾ ಕೆಲಸವನ್ನು ಸ್ಥಗಿತಗೊಳಿಸಿ ಪುರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಮುಖ್ಯಾಧಿಕಾರಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಂಟೇ ಮಂಜು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದ ಪುರಸಭೆ ಅಧ್ಯಕ್ಷೆ ರತ್ನಮ್ಮ ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷ ಡಿ.ಪ್ರೇಮಕುಮಾರ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಕ್ಕೆ ಪೌರಕಾರ್ಮಿಕರ ಸಮಸ್ಯೆಗಳನ್ನು ಗಮನಕ್ಕೆ ತಂದು ಸೇವೆಯನ್ನು ಖಾಯಂಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿ ಪ್ರತಿಭಟನೆ ವಾಪಸ್ ಪಡೆಯುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ಟಿ.ಚಕ್ರಪಾಣಿ, ಹೆಚ್.ಕೆ.ಅಶೋಕ, ಸದಸ್ಯ ನಂಜುಂಡಯ್ಯ, ಮುಖಂಡ ಬೇಲದಕೆರೆ ಪಾಪೇಗೌಡ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: