ಮೈಸೂರು

ವೈದ್ಯನಂತೆ ರೋಗಿಯನ್ನು ಪರೀಕ್ಷಿಸಿದ ಶುಶ್ರೂಷಕ : ಎಫ್.ಐ.ಆರ್. ದಾಖಲಿಸಲು ಸೂಚನೆ

ಮೈಸೂರು,ಜ.19:- ಶುಶ್ರೂಷಕನೇ ವೈದ್ಯರಂತೆ ರೋಗಿಯನ್ನು ಪರೀಕ್ಷಿಸಿ ಔಷಧಿ ನೀಡಿದ ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ` ಆದಿತ್ಯ ಆದಿಕರಿ ಆಸ್ಪತ್ರೆ’ಯ ಶುಶ್ರೂಷಕನ ವಿರುದ್ಧ ಎಫ್.ಐ.ಆರ್. ದಾಖಲಿಸಲು ಸೂಚಿಸಲಾಗಿದೆ.

ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ವತಿಯಿಂದ ಈ ಆದೇಶ ಹೊರಬಿದ್ದಿದೆ. ಇದೇ ಜ.17 ರಂದು ಹೊರಡಿಸಿರುವ ಆದೇಶಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಸಹ ನಿರ್ದೇಶಕರು ಸಹಿ ಮಾಡಿದ್ದಾರೆ.

ಘಟನೆಯ ಹಿನ್ನೆಲೆ

ಮೈಸೂರಿನ ಕುಂಬಾರಗೇರಿ ನಿವಾಸಿ ಜಿ.ಶ್ರೀನಿವಾಸ್ ಎಂಬವರು ` ಆದಿತ್ಯ ಆದಿಕರಿ ಆಸ್ಪತ್ರೆ’ಯ ವಿರುದ್ಧ ದೂರು ನೀಡಿದ್ದರು. ದೂರಿನಲ್ಲಿ ಆಸ್ಪತ್ರೆಯ ಸಿಬ್ಬಂದಿ ದಿನೇಶ್ ಎಂಬವರ ವಿರುದ್ಧ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೂರಿನ ಸಮಗ್ರ ವಿಚಾರಣೆ ನಡೆಸಿ ವರದಿ ನೀಡಲು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಸೂಚಿಸಲಾಗಿತ್ತು. ಅದರಂತೆ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿ ವರದಿಯನ್ನು ಸಲ್ಲಿಸಿದ್ದರು.

ಈ ವರದಿಯಲ್ಲಿ ` ಆದಿತ್ಯ ಆದಿಕರಿ ಆಸ್ಪತ್ರೆಯ’ ಶುಶ್ರೂಷಕ ದಿನೇಶ್ ವೈದ್ಯರಲ್ಲ. ಆದರೆ ವೈದ್ಯರಂತೆ ಸ್ಟೆಥೋಸ್ಕೋಪ್ ಧರಿಸಿ ಪ್ರಿಸ್ಕ್ರಿಪ್ಶನ್ ನೀಡಿರುವುದು ಕಂಡು ಬಂದಿದೆ. ಜೊತೆಗೆ ಕರ್ತವ್ಯದ ವೇಳೆ ಸಮವಸ್ತ್ರ ಧರಿಸಿಲ್ಲದಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ದಿನೇಶ್ ವಿರುದ್ಧ ಎಫ್.ಐ.ಆರ್.ದಾಖಲಿಸುವಂತೆ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಸೂಚಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: