ಕರ್ನಾಟಕಪ್ರಮುಖ ಸುದ್ದಿ

ಎಲ್ಲೆಲ್ಲಿ ಮಂಗನ ಕಾಯಿಲೆ?: ಮಾಹಿತಿ ವಿನಿಮಯಕ್ಕೆ ವಾಟ್ಸಪ್ ಗ್ರೂಪ್

ಮಂಗಳೂರು (ಜ.19): ಮಂಗನ ಕಾಯಿಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗು ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಮಂಗನ ಕಾಯಿಲೆಯ ಬಗ್ಗೆ ನಿರಂತರವಾಗಿ ಮಾಹಿತಿ ವಿನಿಮಯಕ್ಕಾಗಿ ತಂತ್ರಜ್ಞಾನದ ಮೊರೆ ಹೋಗಲಾಗಿದೆ. ಕಾಯಿಲೆಯ ಬಗ್ಗೆ ಹಾಗು ಇತರ ಮಾಹಿತಿ ವಿನಿಮಯಕ್ಕಾಗಿ ಪ್ರತ್ಯೇಕ ವಾಟ್ಸಪ್ ಗ್ರೂಪ್ ಒಂದನ್ನು ರಚಿಸಿಕೊಳ್ಳಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುನ್ನೆಚ್ಚರಿಕೆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗಾಗಿ ಪ್ರತ್ಯೇಕ ವಾಟ್ಸಪ್ ಗ್ರೂಪ್ ರಚಿಸಿ ಕೊಳ್ಳಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದ್ದಾರೆ.

ಮಂಗನ ಕಾಯಿಲೆ ಮಲೆನಾಡಿನ ಶಿವಮೊಗ್ಗದಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಜಾಗರೂಕತೆ ಅಗತ್ಯವಾಗಿದೆ. ಪ್ರತ್ಯೇಕ ವಾಟ್ಸಪ್ ಗ್ರೂಪ್ ರಚಿಸಿ ಜಿಲ್ಲೆ ಯಲ್ಲಿ ಮಂಗಗಳ ಸಾವು ಕಂಡುಬಂದರೆ ಅದಕ್ಕೆ ತೆಗೆದು ಕೊಂಡ ಕ್ರಮಗಳೇನು ಅಥವಾ ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ನಡುವೆ ಉಡುಪಿಯಲ್ಲಿಯೂ ಹೆಚ್ಚಿನ ಜಾಗ್ರತೆ ವಹಿಸಲಾಗುತ್ತಿದೆ. ಶಂಕಿತ ಮಂಗನ ಕಾಯಿಲೆ ರೋಗಕ್ಕೆ ಚಿಕಿತ್ಸೆ ಪಡೆಯಲು ಉಡುಪಿಯ ಕೆ ಎಂ ಸಿ ಆಸ್ಪತ್ರೆಯಲ್ಲಿ ಇದುವರೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ ಒಟ್ಟು 98 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು ಈ ಪೈಕಿ 65 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. 33 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಾದ್ಯಂತ ಮಂಗಗಳ ಸಾವಿನ ಸಂಖ್ಯೆ ಹೆಚ್ಚಾಗಿರು ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಭೆ ನಡೆಸಲಾಗಿದೆ. ಸಭೆಯಲ್ಲಿ ಹಲವು ಮುಂಜಾಗ್ರತೆ ಕ್ರಮವಾಗಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. (ಎನ್.ಬಿ)

Leave a Reply

comments

Related Articles

error: