ಪ್ರಮುಖ ಸುದ್ದಿಮೈಸೂರು

‘ಸೋಶಿಯಲ್ ಲಿಂಗ್ವಿಸ್ಟಿಕ್’ ನ್ನು ನಮ್ಮ ದೇಶದಲ್ಲಿ ಹೆಸರೆತ್ತುವ ಮುನ್ನವೇ ಭೈರಪ್ಪನವರು ತಮ್ಮ ಕಾದಂಬರಿಯಲ್ಲಿ ಕ್ರಾಂತದರ್ಶಿಯಾಗಿ ಉಲ್ಲೇಖಿಸಿದ್ದರು : ಶತಾವಧಾನಿ ಡಾ.ಆರ್.ಗಣೇಶ್

ಮೈಸೂರು,ಜ.19:- ಸೋಶಿಯಲ್ ಲಿಂಗ್ವಿಸ್ಟಿಕ್ ಎನ್ನುವುದನ್ನು ನಮ್ಮ ದೇಶದಲ್ಲಿ ಹೆಸರೆತ್ತುವ ಮುನ್ನವೇ ಭೈರಪ್ಪನವರು ತಮ್ಮ ಕಾದಂಬರಿಯಲ್ಲಿ ಕ್ರಾಂತದರ್ಶಿಯಾಗಿ ಉಲ್ಲೇಖಿಸಿದ್ದರು. ಶಾಸ್ತ್ರವಾಗಿ ಅಲ್ಲ ಕಲೆಯಾಗಿ ಎಂದು ಶತಾವಧಾನಿ ಡಾ.ಆರ್.ಗಣೇಶ್ ತಿಳಿಸಿದರು.

ಅವರಿಂದು ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ವತಿಯಿಂದ ಎರಡು ದಿನಗಳ ಕಾಲ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾದ ಎಸ್.ಎಲ್ ಭೈರಪ್ಪ ಸಾಹಿತ್ಯೋತ್ಸವ-2019ರಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜದ ಮೌಲ್ಯಗಳ ಒದ್ದಾಟ ಹೇಗೆ ಎನ್ನುವುದನ್ನು ಭೈರಪ್ಪನವರ ಕೃತಿಗಳು ತಿಳಿಸುತ್ತವೆ. ಸಮಾಜದ ರಚನೆಯಲ್ಲಿ ಏನೆಲ್ಲ ಸೂಕ್ಷ್ಮತೆಗಳಿರುತ್ತವೆ. ಅಲ್ಲಿ ಬರುವ ಮೌಲ್ಯ ಸಂಘರ್ಷ ಯಾವ ರೀತಿಯದು ಎಂಬುದನ್ನು ತಿಳಿಸುತ್ತವೆ. ಆನಂದಾನುಭವದ ಶಕ್ತಿ ಇರುವುದು ಅಹಂಕಾರದ ಮೇಲೆ. ರಸಾನಂದ ಅಹಂಕಾರ ಕರಗಿಸುವುದರಿಂದ ಬರುತ್ತದೆ. ಬ್ರಹ್ಮಾನಂದ ಅಹಂಕಾರದ ವಿನಾಶದಿಂದ ಬರುತ್ತದೆ. ಪ್ರತಿಯೊಂದು ವ್ಯಕ್ತಿತ್ವದ ಅಸ್ಮಿತಾಭಾವ ಹೇಗೆ ಬ್ರಹ್ಮಾನಂದದ ಕಡೆ ಹೋಗುತ್ತದೆ. ಅದನ್ನು ಭೈರಪ್ಪನವರು ರಸಾನಂದದ ಕಡೆ ತಿರುಗಿಸಲು ಎಷ್ಟು ರಮಣೀಯ ಪ್ರಕಲ್ಪ ಮಾಡಿಕೊಟ್ಟಿದ್ದಾರೆ ಎಂದರು. ಅವರಲ್ಲಿ ಅನುಭವದ ಗಾಢತೆ ಮನೆ ಮಾಡಿದೆ. ಅವರ ಸಾಹಿತ್ಯದ ಶರೀರ ಭಾರತೀಯವಾದ್ದು. ಆತ್ಮವೈಶ್ರಿಕವಾದದ್ದು. ಸಾಹಿತ್ಯಿಕ ಶರೀರ ಕನ್ನಡದ್ದ. ಆದರೆ ಆತ್ಮ ಮಾತಿಗೆ ಮೀರಿದ ರಸಭಾವಗಳದ್ದು. ಇಂತಹ ಸಿದ್ದಿಯನ್ನು ಕೊಟ್ಟಿದ್ದಾರೆ. ಶತಶತಮಾನಗಳಿಗೆ ಬರತಕ್ಕ ಪ್ರತಿಭೆ. ಕನ್ನಡದ ಹೆಮ್ಮೆ. ಕನ್ನಡಿಗರಾದ ನಾವು ನಿಜಕ್ಕೂ ಪುಣ್ಯವಂತರು ಎಂದು ತಿಳಿಸಿದರು.

ದೇಶದ ತಲ್ಲಣ ‘ತಂತು’ ಕಾದಂಬರಿಯಲ್ಲಿದೆ. ಆಧುನಿಕ ಮಹಾಭಾರತ ಅಂತಲೇ ಕರೆಸಿಕೊಂಡಿದೆ. ನನ್ನದಲ್ಲದ್ದನ್ನು ಎತ್ತಿಕೊಂಡು ಹೋಗುವುದು ಕಳುವು. ಸಾಧನಗಳು ನಮ್ಮದೆಂದು ಭಾವಿಸಿದರೆ ಅಂದು ನಮ್ಮ ಸಾಕ್ಷಿ ಪ್ರಜ್ಞೆ ಹೋಗುತ್ತದೆ. ಸಾಧನ ಇರುವುದು ಸಿದ್ಧಿಗಾಗಿ. ದ್ವಂದ್ವಗಳನ್ನು ಮೀರಿ ಭಾವವನ್ನು ಮೀರಬೇಕು. ಅವರ ಕಲೆಯಲ್ಲಿ ಸಂಘರ್ಷಕ್ಕೆ ಬಂದರೆ ಅಸಾಮಾನ್ಯವಾಗಿದೆ. ಸಂಘರ್ಷದ ಕ್ರಮ, ಹೊಯ್ದಾಟಕ್ಕೆ ‘ಜಲಪಾತ’. ಸೃಷ್ಟಿಯಲ್ಲಿ ಮೂರು ಹಂತ ಋತುಮಾನದ ವ್ಯತ್ಯಾಸಗಳು,ಗಂಡು-ಹೆಣ್ಣು, ಕಲಾಸೃಷ್ಟಿ ಗಳನ್ನು ತೆಗೆದುಕೊಂಡಿದ್ದಾರೆ. ನನ್ನೊಳಗೆ ಕೆಟ್ಟದ್ದು, ಒಳ್ಳೆಯದ್ದು ಬರಬಹುದು. ಒಂದರೊಳಗೊಂದು ಮೌಲ್ಯಮಾಪನ ಮಾಡುತ್ತಾರೆ. ಕಲಾಮೀಮಾಂಸೆಯನ್ನು ತಂತುವಿನಲ್ಲಿ ಮಾಡುತ್ತಾರೆ. ಕಾದಂಬರಿ ಓದಿಲ್ಲ. ಅವರ ವ್ಯಕ್ತಿತ್ವ ಮುಟ್ಟಿದೆ ಎನ್ನುವ ವ್ಯಕ್ತಿಯಿಂದ ಮೊದಲ್ಗೊಂಡು ಕಾದಂಬರಿಯನ್ನೇ ಬರೆದವರಿದ್ದಾರಲ್ಲ ಅವರಿಗೂ ರಸ ಸಿಗುತ್ತದೆ. ರಸ ಸಿಗದಿದ್ದರೆ ಬರೆಯುತ್ತಿರಲಿಲ್ಲ. ಅವರ ಕಾದಂಬರಿಗೆ ಅವರೇ ಓದುಗರು. ಕೃತಿ ಯಾವ ನಿಟ್ಟಿನಿಂದ ನೋಡಿದರೂ ಸ್ವಾರಸ್ಯ. ನಾವು ಒಂದು ವಸ್ತುವಿನ ಕುರಿತು ಆಲೋಚನೆ ಮಾಡುವುದಕ್ಕಿಂತ ಯಾರಾದರೂ ಭೈರಪ್ಪನವರ ಕೃತಿಗಳಲ್ಲಿ ಈ ವಸ್ತು ಹೇಗೆ ಕಾಣಬಹುದು ಎಂದು ಭಾಷಣ ಮಾಡಿ ಎಂದರೆ ನಾವು ಮಾಡಿಬಿಡಬಹುದು. ಯಾಕೆಂದರೆ ಯಾವ ದಿಕ್ಕಿನಿಂದ ಪ್ರವೇಶ ಮಾಡಿದರೋ ಅದೇ ಕನೆಕ್ಟಿವಿಟಿ ಬರಲಿದೆ. ಕಲೆಯ ಅನುಕೂಲತೆ ಇಲ್ಲಿದೆ. ವ್ಯಕ್ತಿಗತವಾಗಿ ಬರುವ ಸಂಘರ್ಷವನ್ನು”ವಂಶ’ಹೇಳಲಿದೆ. ‘ದಾಟು’ವಿನಲ್ಲಿ ಒಂದೊಂದು ಅಂಶವೂ ಒಂದೊಂದು ಸಂಕೇತವನ್ನು ತಿಳಿಸಲಿದೆ ಎಂದರು.

ಕರ್ಮ ಸಿದ್ಧಾಂತ ಒಳ್ಳೆಯದು ಮಾಡಿದರೆ ಒಳ್ಳೆಯದು, ಕೆಟ್ಟದ್ದು ಮಾಡಿದರೆ ಕೆಟ್ಟದ್ದು.  ಶ್ರೋತ್ರೀಯರಿಗೆ ಹುಟ್ಟು ಹುಸಿ ಇರಬಹುದು ಆದರೆ ಕೊಟ್ಟ ಸಂಸ್ಕಾರ ಹುಸಿಯಲ್ಲ. ಶಂಕರರು ಒಂದು ಕಡೆ ಭಾಷ್ಯದಲ್ಲಿ ಹೇಳುತ್ತಾರೆ ಶಾಸ್ತ್ರ ಎನ್ನುವುದು ಮಿಥ್ಯೆಯೇ ಆಗಿದ್ದರೂ ಶಾಸ್ತ್ರ ಹೊರಗಿನ ಕೃತಿಯಾಗಿ ಮಿಥ್ಯೆ. ಆದರೆ ಅದು ತಂದುಕೊಡುವ ಜ್ಞಾನ ಸತ್ಯ. ಮೈಸೂರಿಗೆ ಬರಲು ಬೆಂಗಳೂರಿನಿಂದ ಹೊರಟಾಗ ಒಂದು ಮೈಲಿಗಲ್ಲು ಮೈಸೂರು 53ಕಿ.ಮೀ ಅಂತಿದ್ದರೆ ಆ ಮೈಲಿಗಲ್ಲು ನಮ್ಮಪ್ಪನಾಣೆ ಮೈಸೂರಿಗೆ ಬಂದಿಲ್ಲ. ದೂರವನ್ನು ಅಳೆದಿಲ್ಲ. ಆದರೆ ಅದು ಸತ್ಯ ಹೇಳುತ್ತಿದೆ. ಎಂದೂ ಬಂದಿಲ್ಲದ, ಅಳೆಯದು ಕಲ್ಲು ಸತ್ಯ ಹೇಳುತ್ತದೆ ಆದರೆ ಅದಕ್ಕೆ ಸತ್ಯ ಗೊತ್ತಿಲ್ಲ. ನಮಗೆ ಪಾಠ ಹೇಳಿಕೊಡತಕ್ಕ ಮೇಸ್ಟ್ರು ಆ ಕ್ಲಾಸಲ್ಲೇ ಕುಳಿತು ಬಿಡ್ತಾರೆ. ಆದರೆ ನಾವು ಪಿಹೆಚ್ ಡಿನೂ ಮಾಡಬಹುದು ಅಂದರೆ ಏನರ್ಥ? ಶ್ರೋತ್ರೀಯರ ಹುಟ್ಟು ಹುಸಿಯಾದರೂ ಹುಟ್ಟಿನ ಪರಿಸರದಲ್ಲಿ ಪಡೆದುಕೊಂಡ ಸಂಸ್ಕಾರ ದೊಡ್ಡದು ಎಂದರು.

ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರ, ಸಾಹಿತಿ ಡಾ.ಎಸ್.ಎಲ್.ಭೈರಪ್ಪ, ಲೇಖಕಿ ಶೆಫಾಲಿ ವೈದ್ಯ, ಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ಸೇಂಟ್ ಫೀಲೋಮಿನಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: