ಕರ್ನಾಟಕಪ್ರಮುಖ ಸುದ್ದಿ

ಕಾಂಗ್ರೆಸ್-ಜೆಡಿಎಸ್‍ನವರು ಮಕ್ಕಳ ಕಳ್ಳರಿದ್ದಂತೆ: ಈಶ್ವರಪ್ಪ ವ್ಯಂಗ್ಯ

ಬೆಂಗಳೂರು (ಜ.19): ಕಾಂಗ್ರೆಸ್-ಜೆಡಿಎಸ್ ಪಕ್ಷದ ಮುಖಂಡರು ಮಕ್ಕಳ ಕಳ್ಳರಿದ್ದಂತೆ. ಹಾಗಾಗಿ ನಾವು ನಮ್ಮ ಪಕ್ಷದ ಶಾಸಕರನ್ನು ರಕ್ಷಣೆ ಮಾಡಿಕೊಳ್ಳಲು ರೆಸಾರ್ಟ್‍ಗೆ ಹೋಗಿದ್ದೇವೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕರಿಗೆ ಕಾಂಗ್ರೆಸ್-ಜೆಡಿಎಸ್‍ನಿಂದಲೇ ಹಣದ ಆಮಿಷ ನೀಡಲಾಗಿತ್ತು. ಹೀಗಾಗಿ ಎಲ್ಲರನ್ನು ರೆಸಾರ್ಟ್‍ಗೆ ಕರೆದೊಯ್ದೆವು. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನಗೊಂಡಿರುವ ಅನೇಕ ಶಾಸಕರು ಬೇಸರಗೊಂಡಿದ್ದಾರೆ. ಈ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಲು ಅವರಿಗೆ ಎಳ್ಳಷ್ಟು ಇಷ್ಟವಿಲ್ಲ. ಅವರಲ್ಲಿರುವ ಹುಳುಕುಗಳನ್ನು ಮುಚ್ಚಿಕೊಳ್ಳಲು ಆಪರೇಷನ್ ಕಮಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ನನ್ನ ಪ್ರಕಾರ ಕಾಂಗ್ರೆಸ್‍ನ 20ಕ್ಕೂ ಹೆಚ್ಚು ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಸಮ್ಮಿಶ್ರ ಸರ್ಕಾರ ತನ್ನ ಆಂತರಿಕ ಕಚ್ಚಾಟದಿಂದಲೇ ಪತನವಾಗುತ್ತದೆ. ಇದನ್ನು ನಾವು ಅಸ್ಥಿರಗೊಳಿಸುವ ಕೆಲಸಕ್ಕೆ ಕೈ ಹಾಕುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಏನು ಮಾತನಾಡುತ್ತಿದ್ದೇನೆ ಎಂಬ ಅರಿವೇ ಇಲ್ಲದಂತೆ ಮಾತನಾಡುತ್ತಿದ್ದಾರೆ. ಒಂದು ರೀತಿ ಹುಚ್ಚು ಬಂದವರಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮೇಲೆ ಆರೋಪ ಮಾಡುತ್ತಿದ್ದಾರೆ.

ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂದು ಹೇಳುವ ಸಿದ್ದರಾಮಯ್ಯ 24 ವರ್ಷದ ಯುವಕರೇ ಎಂದು ಈಶ್ವರಪ್ಪ ಪ್ರಶ್ನಿಸಿದರು. ನಾವು ರೆಸಾರ್ಟ್‍ಗೆ ಹೋದರೆ ಮಹಾಪರಾಧವಾಗುತ್ತದೆ. ಅಲ್ಲಿಗೆ ಬರ ಅಧ್ಯಯನ ಮಾಡಲು ಹೋಗಿದ್ದಾರೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸುತ್ತಾರೆ. ಈಗ ಕಾಂಗ್ರೆಸ್‍ನ ಶಾಸಕರು ರೆಸಾರ್ಟ್ ಹೋಗಿರುವುದಕ್ಕೆ ಏನು ಹೇಳುತ್ತಾರೆ ಎಂದು ಕಿಡಿಕಾರಿದರು. ಸರ್ಕಾರ ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ. ಹಾಗಂತ ಇದನ್ನು ಪತನಗೊಳಿಸುವ ಸಂಚು ನಾವು ಮಾಡುತ್ತಿಲ್ಲ. ಸಮ್ಮಿಶ್ರ ಸರ್ಕಾರ ಅಸ್ಥಿರಗೊಂಡರೆ ದೊಡ್ಡ ಪಕ್ಷವಾಗಿರುವ ನಾವು ಏನು ಮಾಡಬೇಕೋ ಅದನ್ನೇ ಮಾಡುತ್ತೇವೆ ಎಂದು ಹೇಳಿದರು. (ಎನ್.ಬಿ)

Leave a Reply

comments

Related Articles

error: