ಮೈಸೂರು

ರಸ್ತೆ ಅಗಲೀಕರಣಕ್ಕೆ ಯೋಜನೆ ರೂಪಿಸಲಾಗಿದೆ : ಮೇಯರ್ ರವಿಕುಮಾರ್

ಮೈಸೂರು ಹೃದಯಭಾಗದಲ್ಲಿರುವ ಇರ್ವಿನ್ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಮೇಯರ್ ಎಂ.ಜೆ.ರವಿಕುಮಾರ್ ಹಾಗೂ ಪಾಲಿಕೆ ಆಯುಕ್ತ ಜೆ.ಜಗದೀಶ್ ಶುಕ್ರವಾರ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಮೇಯರ್ ರವಿಕುಮಾರ್, ಮೈಸೂರು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಸಂಚಾರ ದಟ್ಟಣೆ ಅಧಿಕವಾಗುತ್ತಿದೆ. ಅದರಲ್ಲೂ ಇರ್ವಿನ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಅತ್ಯಧಿಕವಾಗಿದೆ. ನಗರ ಸಾರಿಗೆ ಬಸ್ ನಿಲ್ದಾಣದಿಂದ ನೆಹರು ವೃತ್ತದವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಮುಗಿದಿದ್ದು ನೆಹರು ವೃತ್ತದಿಂದ ಕೆ.ಆರ್.ಆಸ್ಪತ್ರೆ ವೃತ್ತದವರೆಗೆ ರಸ್ತೆ ಅಗಲೀಕರಣ ಮಾಡಬೇಕಿದೆ. ರಸ್ತೆ ಅಗಲೀಕರಣ ಮಾಡುವ ಸಂಬಂಧ ಈಗಾಗಲೇ ಯೋಜನೆ ರೂಪಿಸಿದ್ದು ರಸ್ತೆಯಲ್ಲಿರುವ ಕಟ್ಟಡಗಳ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗಿದೆ. 89 ಮಂದಿ ಮಾಲೀಕರಲ್ಲಿ 53 ಜನ ಒಪ್ಪಿಗೆ ಸೂಚಿಸಿದ್ದಾರೆ. ಅವರಲ್ಲಿ ಐದಾರು ಮಂದಿ ಹೆಚ್ಚಿನ ಪರಿಹಾರ ಕೇಳುತ್ತಿದ್ದು ಇನ್ನು ವಾರ ಅಥವಾ ತಿಂಗಳುಗಳಲ್ಲಿ ಅವರ ಮನವೊಲಿಸಿ, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

ಪಾಲಿಕೆ ಆಯುಕ್ತ ಜಗದೀಶ್ ಮಾತನಾಡಿ ಇರ್ವಿನ್ ರಸ್ತೆ ಕಿರಿದಾಗಿರುವುದರಿಂದ ವಾಹನದಟ್ಟಣೆ ಅಧಿಕವಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ರಸ್ತೆ ಅಗಲೀಕರಣ ಮಾಡಲು ಮುಂದಾಗಿದ್ದೇವೆ. ಲ್ಯಾಂಡ್ ಅಕ್ವಿಜಿಷನ್ ಮೂಲಕ ಮಾಡಿದರೆ ಹೆಚ್ಚಿನ ಹೊರೆಯಾಗುವುದರಿಂದ ನೇರವಾಗಿ ಖರೀದಿ ಮಾಡಲು ಅವಕಾಶವಿದ್ದು ಕಟ್ಟಡಗಳ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗಿದೆ. ರಸ್ತೆಯ ಮಧ್ಯದಿಂದ ಎರಡೂ ಕಡೆಗೂ 9ಮೀ. ಹೆಚ್ಚಿಸಲಾಗುತ್ತದೆ. ಅದರಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ಪರಿಹಾರ ನೀಡುವುದಿಲ್ಲ. ಉಳಿದಂತೆ ಅವರ ಸ್ವಂತ ಜಾಗವಾಗಿದ್ದರೆ ಚದರ ಅಡಿಗೆ 13,177 ರೂ ಪರಿಹಾರ ನೀಡಲಾಗುತ್ತದೆ. ಕಟ್ಟಡಗಳನ್ನು ತೆರವುಗೊಳಿಸಿ ಜಾಗವನ್ನು ಕೊಂಡುಕೊಳ್ಳಲು ಅಂದಾಜು 45 ಕೋಟಿ ರೂ ಬೇಕಿದ್ದು ಸದ್ಯ 14 ಕೋಟಿ ಲಭ್ಯವಿದೆ. ಉಳಿದ ಹಣವನ್ನು ಸರ್ಕಾರ ಬಿಡುಗಡೆ ಮಾಡಲಿದ್ದು ಅಗಲೀಕರಣಕ್ಕೆ ಅನುಮತಿ ದೊರೆತ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಸಯ್ಯಾಜಿರಾವ್ ರಸ್ತೆಯಲ್ಲಾಗುತ್ತಿರುವ ಕಾಂಕ್ರೀಟ್ ಕಾಮಗಾರಿಯನ್ನು ಪರಿಶೀಲನೆ ಮಾಡಿದರು. ಪಾಲಿಕೆ ಸದಸ್ಯರಾದ ರಾಜಲಕ್ಷ್ಮಿ, ಶಿವಣ್ಣ, ರಮಣಿ, ಎಸಿ ಸೋಮಶೇಖರ್, ನಾಗರಾಜು ಸುರೇಶ್ ಬಾಬು, ಜಗದೀಶ್, ಸುರೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Leave a Reply

comments

Related Articles

error: