ಕರ್ನಾಟಕಪ್ರಮುಖ ಸುದ್ದಿ

ಶ್ರೀಗಳ ಆರೋಗ್ಯ ಗಂಭೀರ: ಎಲ್ಲ ಕೆಲಸ ರದ್ದು ಮಾಡಿ ಸಿದ್ಧಗಂಗಾ ಮಠಕ್ಕೆ ಬಿಎಸ್ವೈ

ಬೆಂಗಳೂರು (ಜ.21): ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಇಂದಿನ ತಮ್ಮ ಬರ ಅಧ್ಯಯನವನ್ನು ರದ್ದುಪಡಿಸಿ ಶ್ರೀಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ಶ್ರೀಗಳ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗಬೇಕಿದ್ದ ಬಿಜೆಪಿ ಶಾಸಕರ ಬರ ಅಧ್ಯಯನ ಪ್ರವಾಸವನ್ನು ಮುಂದೂಡಲಾಗಿದೆ. ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದ್ದು, ನಾನು ಅವರ ಭೇಟಿಗೆ ತೆರಳುತ್ತಿದ್ದೇನೆ. ಆದ್ದರಿಂದ ಬಿಜೆಪಿಯ ಬರ ಅಧ್ಯಯನ ಪ್ರವಾಸವನ್ನು ಮುಂದೂಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇಂದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರ ಏಳು ಸದಸ್ಯರ ತಂಡ ನಾಲ್ಕು ಬರಗಾಲಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಬೇಕಿತ್ತು. ಬೆಳಗ್ಗೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಂಡ ಬರಗಾಲ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸಕ್ಕೆ ತೆರಳಬೇಕಿತ್ತು.

ಸರ್ಕಾರ ಕೈಗೊಂಡಿರುವ ಬರ ಜಿಲ್ಲೆಗಳಿಗೆ ಪರಿಹಾರಗಳ ಬಗ್ಗೆ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯಲು ಬಿಜೆಪಿ ಮುಂದಾಗಿತ್ತು. ನಾಳೆ ಮಂಗಳವಾರ ಯಡಿಯೂರಪ್ಪನವರು ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಬರಪರಿಸ್ಥಿತಿ ಕುರಿತು ಅಧ್ಯಯನ ನಡೆಸಬೇಕಿತ್ತು.

ಈ ತಂಡದಲ್ಲಿ ವಿಧಾನ ಪರಿಷತ್ ಸದಸ್ಯ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿ ಕುಮಾರ್, ಮಾಜಿ ಸಚಿವರಾದ ಬಿ ಎನ್ ಬಚ್ಚೇಗೌಡ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಪಕ್ಷದ ಹಿರಿಯ ಕಾರ್ಯಕಾರಿ ಜಯದೇವ್, ಮರಿಸ್ವಾಮಿ ಮತ್ತು ವೆಂಕಟಮುನಿಯಪ್ಪ ಮತ್ತು ಇತರ ಸದಸ್ಯರು ಇದ್ದಾರೆ. ಈಗ ಶ್ರೀಗಳ ಆರೋಗ್ಯ ಏರುಪೇರಾಗಿರುವುದರಿಂದ ಬರ ಪ್ರವಾಸ ಬಹುತೇಕ ರದ್ದಾಗುವ ಸಂಭವವಿದೆ. (ಎನ್.ಬಿ)

Leave a Reply

comments

Related Articles

error: