ಪ್ರಮುಖ ಸುದ್ದಿಮೈಸೂರು

‘ವಿಷ ಪ್ರಸಾದ’ ‘ಕೊನೆಯ ರೋಗಿ’ ಸಂಪೂರ್ಣ ಗುಣಮುಖ ; ಬಿಡುಗಡೆ ಇಂದು

ಸವಾಲಿನ ನಡುವೆ ಆಸ್ಪತ್ರೆಯಿಂದ ಯಶಸ್ವಿ ಔಷಧೋಪಚಾರ

ಮೈಸೂರು,ಜ.21 : ಸುಳ್ವಾಡಿ ಗ್ರಾಮದ ಕಿಚ್ ಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದವನ್ನು ಸೇವಿಸಿ ಗಂಭೀರ ಸ್ಥಿತಿಯಲ್ಲಿ ಬಂದು ಆಸ್ಪತ್ರೆಗೆ ದಾಖಲಾಗಿದ್ದ ರುಕ್ಮಿಣಿ ಎಂಬ ಮಹಿಳೆಯು ಇಂದು ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದುತ್ತಿದ್ದಾರೆ ಎಂದು ಸುಯೋಗ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ತಿಳಿಸಿದರು.

 

ವಿಷ ಪ್ರಸಾದ ಸೇವನೆಯಿಂದಾಗಿ ರುಕ್ಮಿಣಿ ಜೀವನ್ಮರಣದ ಹೋರಾಟದಲ್ಲಿ ಆಸ್ಪತ್ರೆಗೆ ದಾಖಲಾದರು, ವಿಷದ ಪ್ರಭಾವವು ಹೆಚ್ಚಾಗಿದ್ದು ಅವರನ್ನು ಬದುಕುಳಿಸುವುದೇ ಸವಾಲಿನ ಸಂಗತಿಯಾಗಿತ್ತು, ಅಂತಹ ಪ್ರಕರಣವನ್ನು ಸ್ವೀಕರಿಸಿದ ಆಸ್ಪತ್ರೆಯು ಸತತವಾಗಿ ಒಂದು ತಿಂಗಳು ಏಳು ದಿನಗಳ ಕಾಲ ನೀಡಿದ ಚಿಕಿತ್ಸೆಯಿಂದ ಇಂದು ಗುಣಮುಖರಾಗಿದ್ದು, ತಮ್ಮ 30 ವರ್ಷಗಳ ಸೇವಾವಧಿಯಲ್ಲಿ ಇಂತಹ ಗಂಭೀರ ಪ್ರಕರಣವನ್ನು ಕಂಡಿರಲಿಲ್ಲ ಎಂದು ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಅಚ್ಚರಿ ವ್ಯಕ್ತಪಡಿಸಿದರು.

ಕಿಚ್ ಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 15 ಜನ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದರು, ಅವರಲ್ಲಿ ಒಬ್ಬರು ಮಾತ್ರ ನಿಧನರಾಗಿದ್ದು ಉಳಿದವರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು ಇಂದು ಕೊನೆ ರೋಗಿಯು ಮನೆಗೆ ತೆರಳುತ್ತಿದ್ದಾರೆ ಎಂದು ವಿವರಿಸಿದರು.

ರುಕ್ಮಿಣಿ ಸ್ಥಿತಿ ತುಂಬಾ ಗಂಭೀರವಾಗಿತ್ತು, ಚಿಕಿತ್ಸೆ ವೇಳೆಯಲ್ಲಿಯೇ ಮೂರು ಬಾರಿ ಹೃದಯ ಸ್ಥಂಭನವಾಗಿತ್ತು, ಕೃತಿಕ ಉಸಿರಾಟದ ಜೋಡಣೆಯಿಂದ ಆಗುವ ದುಷ್ಪರಿಣಾಮದಿಂದಲೂ ವಿಸ್ಮಯಕಾರಿಯಾಗಿ ಪಾರಾಗಿದ್ದಾರೆ, ಅತಿ ವಿರಳವಾಗಿ ವಿಷದ ದುಷ್ಪರಿಣಾಮ ಒಂದು ವರ್ಷದ ಕಾಲ ದೇಹದಲ್ಲಿ ಗೋಚರಿಸಲಿದ್ದು, ಈಗ ಬೇರೆ ಬೇರೆ ಕಾರಣಗಳಿಂದ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ ಹೊರತು ವಿಷದಿಂದ ಅಲ್ಲ.  ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಗಿಗಳಿಂದ ಹಣ ಪಡೆಯದಂತೆ ಸುಮಾರು 20 ಲಕ್ಷ ರೂ.ಗಳ ಉಚಿತ ಚಿಕಿತ್ಸೆ ನೀಡಿದ್ದು, ನೀಡಿದ ಆಶ್ವಾಸನೆಯಂತೆ ಸರ್ಕಾರ ಚಿಕಿತ್ಸಾ ವೆಚ್ಚ ಭರಿಸಲಿದೆ ಎಂಬ ಆಶಾಭಾವನೆಯನ್ನು  ವ್ಯಕ್ತಪಡಿಸಿದರು.

ಡಾ.ಮಹೇಶ್ ಬಾಬು, ಬಿಡುಗಡೆ ಹೊಂದುತ್ತಿರುವ ರುಕ್ಮಿಣಿ, ರಮೇಶ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: