ಮೈಸೂರು

ಸಡಗರ ಸಂಭ್ರಮದ ಸಂಕ್ರಾಂತಿಗೆ ಜೋರಾಗಿ ನಡೆದಿದೆ ಸಿದ್ಧತೆ

ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ  ಸಂಕೇತ ಎಂದು ಹೇಳಲಾಗುತ್ತದೆ

ಸಂಕ್ರಾಂತಿ ಕರ್ನಾಟಕ, ತಮಿಳುನಾಡು, ಕೇರಳದ ಪ್ರಮುಖ ಹಬ್ಬಗಳಲ್ಲಿ ಒಂದು.  ಇದರಲ್ಲಿ ಮುಖ್ಯವಾಗಿ ಕಂಡು ಬರುವುದು ಎಳ್ಳುಬೆಲ್ಲ, ಒಣಕೊಬ್ಬರಿ, ಹುರಿಗಡಲೆ, ಕಬ್ಬು. ಇವುಗಳನ್ನು ಒಂದು ಬಟ್ಟಲಿನಲ್ಲಿ ಇರಿಸಿ ಹೊಸ ಬಟ್ಟೆ ಧರಿಸಿದ ಹೆಣ್ಣುಮಕ್ಕಳು ಮನೆಮನೆಗೂ ಹಂಚಲು ತೆರಳುತ್ತಾರೆ.

ಸಾಂಸ್ಕೃತಿಕನಗರಿಯ ಮೈಸೂರಿನಲ್ಲಿಯೂ ಸಂಕ್ರಾಂತಿಯ ಸಿದ್ಧತೆ ಜೋರಾಗಿ ನಡೆದಿದೆ. ಹುರಿದ ಎಳ್ಳು ಜತೆಗೆ ಸಕ್ಕರೆ ಅಚ್ಚು, ಕಬ್ಬಿನ ತುಂಡು, ಒಣ ಕೊಬ್ಬರಿ, ಹುರಿಗಡಲೆ, ಕಡಲೇಬೀಜ ಸೇರಿಸಿ ಎಳ್ಳು ಬೆಲ್ಲು ನೀಡಿ ಸಂಕ್ರಾಂತಿಯನ್ನು ಆಚರಿಸಲು ಬೇಕಾದ ಸಿದ್ಧತೆಯನ್ನು  ಮಾಡಿಕೊಳ್ಳುತ್ತಿದ್ದಾರೆ. ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರದ ಭರಾಟೆ ಜೋರಾಗಿಯೇ ನಡೆದಿದೆ.
ದೇವರಾಜ ಮಾರುಕಟ್ಟೆ ಮತ್ತು ಅಗ್ರಹಾರ ವೃತ್ತಗಳಲ್ಲಿ ಕಬ್ಬು ಭರ್ಜರಿ ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ ಮಿನುಗಿತ್ತು. 1 ಕಬ್ಬಿಗೆ 30 ರೂ. ಆದರೂ ಜನರು ತಮ್ಮ ಪ್ರೀತಿ ಪಾತ್ರರಿಗೆ ನೀಡಲು ಖರೀದಿಸಲು ಮುಗಿಬಿದ್ದಿದ್ದರು. ಸಕ್ಕರೆ, ಬೆಲ್ಲದ ಅಚ್ಚು, ಜೀರಿಗೆ ಮಿಶ್ರಿತ ಪೊಟ್ಟಣ ಖರೀದಿ ಭರಾಟೆಯೂ ಜೋರಾಗಿತ್ತು.
ಎಳ್ಳುಬೆಲ್ಲ ನೀಡಲು ಪುಟ್ಟ ಪ್ಲಾಸ್ಟಿಕ್ ಡಬ್ಬಗಳನ್ನು ನಾಗರಿಕರು ಖರೀದಿಸುತ್ತಿದ್ದರಿಂದ ಶಿವರಾಮಪೇಟೆಯ ಪ್ಲಾಸ್ಟಿಕ್ ಮಾರಾಟಗಾರರಿಂದ ಒಳ್ಳೆಯ ವ್ಯಾಪಾರ ನಡೆದಿತ್ತು

ಕೆಲವೆಡೆ ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು ಸಂಕ್ರಾಂತಿಯ ಸಮಯದ ಸಂಭ್ರಮವಾದರೆ, ಇನ್ನು ಕೆಲವು ಕಡೆಗಳಲ್ಲಿ  ದನಕರುಗಳನ್ನು ಸಿಂಗರಿಸುವುದು ಮತ್ತು ಮೆರವಣಿಗೆ ಮಾಡುವುದರ ಜೊತೆ  ಅವುಗಳನ್ನು ಕಿಚ್ಚು ಹಾಯಿಸುತ್ತಾರೆ.

ಸಂಕ್ರಾಂತಿ ಹಬ್ಬದಲ್ಲಿ ಎಳ್ಳು ಬೆಲ್ಲದಷ್ಟೇ ಮಹತ್ವ ಅವರೇಕಾಯಿಗೂ ಇದೆ. ಹಬ್ಬದ ಅಂಗವಾಗಿ ತಯಾರಿಸುವ ವಿಶೇಷ ಆಹಾರದಲ್ಲಿ ಅವರೇಕಾಯಿಗೆ ವಿಶೇಷ ಸ್ಥಾನ ನೀಡಲಾಗಿದೆ. ಆದರೆ, ಈ ವರ್ಷ 1 ಕೆಜಿಗೆ 70 ರೂ.ಗಳಾಗಿದ್ದು, ಅವರೇಕಾಯಿ ಖರೀದಿಸಲು ಹೋದವರಲ್ಲಿ ನಿರಾಸೆ ಮೂಡಿದೆ.
ತರಕಾರಿ ಬೆಲೆ ಕುಸಿತ : ಬೀನ್ಸ್ 40 ರೂ. ಏರಿಕೆಯಾಗಿದ್ದರೆ. ಕ್ಯಾರೆಟ್, ಬಿಟ್‍ರೋಟ್ 1 ಕೆಜಿ 10 ರೂ. ಅಗ್ಗವಾಗಿತ್ತು. ಬದನೆಕಾಯಿ, ಬಟಾಣಿಕಾಯಿ ಕೆಜಿ 30 ರೂ. ಉಳಿದ ಎಲ್ಲ ತರಕಾರಿಗಳು ಅಗ್ಗದ ದರದಲ್ಲಿ ಲಭ್ಯವಾಗುತ್ತಿದ್ದವು.
ಸೇವಂತಿಗೆ 50 ರೂ. ಕನಕಾಂಬರ 100 ಗ್ರಾಂಗೆ 50 ರೂ.  ಏಲಕ್ಕಿ ಬಾಳೆ 1 ಕೆಜಿಗೆ 50 ರೂ. ಸೇಬು 120ರೂಗಳಲ್ಲಿ ಮಾರಾಟವಾಗುತ್ತಿತ್ತು.

ಒಟ್ಟಿನಲ್ಲಿ ಶನಿವಾರ ನಡೆಯಲಿರುವ ಸಂಕ್ರಾಂತಿಗೆ ಭರದ ಸಿದ್ಧತೆ ನಡೆದಿದೆ.

 

Leave a Reply

comments

Related Articles

error: