ಮೈಸೂರು

ನಡೆದಾಡುವ ದೇವರು ಲಿಂಗೈಕ್ಯ : ಹೊಸಮಠದ ಶ್ರೀಗಳವರಿಂದ ಸಂತಾಪ

ಮೈಸೂರು,ಜ.22:- ಶ್ರೀ ಸಿದ್ಧಗಂಗಾ ಕ್ಷೇತ್ರಾಧಿಪತಿಗಳಾದ ನಿ.ಪ್ರ.ಸ್ವ. ಡಾ. ಶಿವಕುಮಾರ ಮಹಾಸ್ವಾಮಿಗಳವರು ಕಾಯಕ ಮತ್ತು ದಾಸೋಹ ಕ್ಷೇತ್ರದಲ್ಲಿ ಅಗ್ರಮಾನ್ಯ ಸಾಧನೆಗೈದವರು. ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ನಿಜಾಚರಣೆಯಲ್ಲಿ ಆಚರಿಸಿ ತೋರಿಸಿದ ತ್ರಿವಿಧ ದಾಸೋಹಿಗಳು. ಪ್ರತಿನಿತ್ಯ ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ಬಡವಿದ್ಯಾರ್ಥಿಗಳಿಗೆ ಮತ ಭೇದವಿಲ್ಲದೆ ಆಶ್ರಯ ನೀಡಿದ ಜಗದ ಜಂಗಮರು ಸಾಮಾನ್ಯವಾಗಿ ಮನುಷ್ಯನ ಆಯುಷ್ಯ ನೂರು ವರ್ಷ. ಆದರೆ ಸಿದ್ಧಗಂಗಾಶ್ರೀಗಳು ಶತಮಾನೋತ್ಸವ ದಾಟಿ 111 ವರ್ಷಗಳನ್ನು ಪೂರೈಸಿದ್ದಾರೆ.

ಪರಮಪೂಜ್ಯರು ಶ್ರೀಮಠದ ಅಧಿಕಾರ ವಹಿಸಿಕೊಂಡ ಮೇಲೆ ಇಂದಿನವರೆಗೆ ದೇಶಾದ್ಯಾಂತ ಕೋಟ್ಯಾನುಕೋಟಿ ಬಡವಿದ್ಯಾರ್ಥಿಗಳು ಜ್ಞಾನಾರ್ಜನೆಯನ್ನು ಪಡೆದು ದೇಶ ವಿದೇಶಗಳಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿದ್ದಾರೆ.

ಇಂತಹ ಪರಮ ಪೂಜ್ಯರ ಕಾಯಕಶೀಲತೆ, ಉದಾರ ದಾಸೋಹ, ತತ್ಪರತೆ ನಮ್ಮಂತಹ ಸಾವಿರಾರು ಮಠಗಳಿಗೆ ಆದರ್ಶ, ಅನುಕರಣೀಯ. 12ನೇ ಶತಮಾನದ ಬಸವಣ್ಣನವರನ್ನು ನಾವು ನೋಡಿಲ್ಲ. ಆದರೆ 21ನೇ ಶತಮಾನದಲ್ಲಿ ಆಧುನಿಕ ಬಸವಣ್ಣನಂತೆ ಸಾಧನೆಗೈದ ಶ್ರೀಸಿದ್ಧಗಂಗಾ ಶಿವಕುಮಾರ ಮಹಾಸ್ವಾಮಿಗಳನ್ನು ಇಂದು ನೋಡುತ್ತಿದ್ದೇವೆ ಇದು ನಮ್ಮ ಸುದೈವ. ಈ ದೃಷ್ಟಿಯಿಂದ ಇವರು ಜಗದ ಜಂಗಮರು ಹೌದು, ನಡೆದಾಡುವ ದೇವರು ಹೌದು, ಮುಂದಿನವರು ಇಂತಹ ಘನಶರಣರ ಸಾಧನೆ ಸಿದ್ಧಿಯನ್ನು ಮುಂದುವರಿಸಿಕೊಂಡು ಹೋಗಲು ಪ್ರಯತ್ನಶೀಲರಾಗಬೇಕು. ಶ್ರೀಗುರು ಪರಂಪರೆಗೆ ಮೇರು ಸದೃಶ, ಈ ಮಹಾ ದಾಸೋಹ ಮೂರ್ತಿಗೆ ನಮ್ಮ ದೇಶ “ಭಾರತ ರತ್ನ ಪ್ರಶಸ್ತಿ” ಗೌರವ ನೀಡುವುದರ ಮೂಲಕ ತಮ್ಮನ್ನು ತಾವು ಗೌರವಿಸಿಕೊಳ್ಳಬೇಕು. ಶತಮಾನದ ಸಂತ, ದಾರ್ಶನಿಕ ಪರಮಪೂಜ್ಯರನ್ನು ನಾವಿಂದು ಕಳೆದುಕೊಂಡಿರುವುದು ನಾಡಿಗೆ ತುಂಬಲಾರದಂತಹ ನಷ್ಟವಾಗಿದೆ ಎಂದು ಹೊಸಮಠದ ಚಿದಾನಂದ ಸ್ವಾಮಿಗಳು ಸಂತಾಪ ಸೂಚಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: