ಮೈಸೂರು

ಡಾ.ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ವಿಚಾರ ನಮ್ಮ ಮನಸ್ಸಿಗೆ ಬಹಳ ಆಘಾತ ತಂದಿದೆ : ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಮೈಸೂರು,ಜ.22:- ಕರ್ನಾಟಕದ ತುಮಕೂರು ಜಿಲ್ಲೆಯ ಸಿದ್ಧಗಂಗಾ ಮಠದ ಪೀಠಾಧಿಪತಿಗಳಾಗಿದ್ದ ಡಾ.ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ವಿಚಾರ ನಮ್ಮ ಮನಸ್ಸಿಗೆ ಬಹಳ ಆಘಾತ ತಂದಿದೆ ಎಂದು ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಅವರು ಮಾಡಿರುವ ಅನ್ನ ದಾಸೋಹ, ಜ್ಞಾನ ದಾಸೋಹಗಳು ಮರೆಯಲಾಗದ ಅತ್ಯದ್ಭುತ ಸೇವೆಗಳಾಗಿವೆ. ಅವರು 1984ನೇ ಇಸವಿಯಲ್ಲಿ ಮೈಸೂರಿನ ನಮ್ಮ ದತ್ತಪೀಠದ ವಿಶ್ವ ಪ್ರಾರ್ಥನಾ ಮಂದಿರದ ಉದ್ಘಾಟನೆಯನ್ನು ನೆರವೇರಿಸಿಕೊಟ್ಟಿದ್ದು ನೆನಪಾಗುತ್ತಿದೆ. ಶ್ರೀಗಳ ಅಗಲಿಕೆ ಇಡೀ ಕರ್ನಾಟಕಕ್ಕೇ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಭಾಗವತವು ನೂರು ವರ್ಷಗಳು ಪೂರೈಸಿದರೆ ಪೂರ್ಣ ಆಯಸ್ಸು ಎಂದು ಹೇಳಿದೆ. ಆದರೆ ಶ್ರೀಗಳು 111 ವರ್ಷಗಳ ಕಾಲ ವಿಶ್ವದ ಜನತೆಯನ್ನು ಅನುಗ್ರಹಿಸಿರುವುದು ನಿಜವಾಗಲೂ ಪವಾಡ ಸದೃಶವೇ ಸರಿ.

ಅವರ ಶಿಷ್ಯ ವೃಂದದವರಿಗೆ, ಭಕ್ತರಿಗೆ, ಅನುಯಾಯಿಗಳಿಗೆಈ ದುಃಖವನ್ನು ಎದುರಿಸುವ ಮನೋ ಧೈರ್ಯ ವನ್ನು ಸಾಕ್ಷಾತ್ ಪರಶಿವನೇ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ.

ಶಿವಕುಮಾರ ಶ್ರೀಗಳು  ಇಂದಿಗೂ ನಮ್ಮ ಮಧ್ಯದಲ್ಲೇ ಇದ್ದಾರೆ. ಶಾರೀರಿಕವಾಗಿ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸೇವೆ, ಮಾರ್ಗದರ್ಶನಗಳು ಎಂದೆಂದಿಗೂ ನಮ್ಮ ಜೊತೆಯಲ್ಲೇ ಇರಲಿವೆ ಎಂಬುದನ್ನು ಭಕ್ತವೃಂದವು ಸ್ಮರಿಸುತ್ತ, ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಮುನ್ನಡೆ ಸಾಧಿಸಬೇಕು. ಅದೇ ಸ್ವಾಮೀಜಿಯವರಿಗೆ ಅರ್ಪಿಸಬಹುದಾದ ಅಮೋಘ ಕಾಣಿಕೆ ಎಂದು ತಿಳಿಸಿದ್ದಾರೆ.  (ಎಸ್.ಎಚ್)

Leave a Reply

comments

Related Articles

error: