ಪ್ರಮುಖ ಸುದ್ದಿಮೈಸೂರು

ಜ.25ರಂದು ಮಹಾಜನ ವಿದ್ಯಾ ಸಂಸ್ಥೆಯ ರೂವಾರಿಗಳ ಪುತ್ಥಳಿ ಅನಾವರಣ

ಕಾಲೇಜು ಆವರಣದಲ್ಲಿ ಅಂಬಳೆ ಸುಬ್ರಹ್ಮಣ್ಯ ಅಯ್ಯರ್ ಹಾಗೂ ರಟ್ಟೆಹಳ್ಳಿ ರಾಮಪ್ಪ ಅವರುಗಳ ಪುತ್ಥಳಿ

ಮೈಸೂರು,ಜ.22 : ಜಯಲಕ್ಷ್ಮೀಪುರಂನ ಮಹಾಜನ ವಿದ್ಯಾಸಂಸ್ಥೆಯ ರೂವಾರಿಗಳಾದ ಅಂಬಳೆ ಸುಬ್ರಹ್ಮಣ್ಯ ಅಯ್ಯರ್ ಹಾಗೂ ರಟ್ಟೆಹಳ್ಳಿ ರಾಮಪ್ಪ ಅವರು ಪುತ್ಥಳಿಯನ್ನು ಕಾಲೇಜಿನ ಆವರಣದಲ್ಲಿ ಜ.25ರಂದು ಅನಾವರಣಗೊಳಿಸಲಾಗುವುದು ಎಂದು ಪೂಜಾ ಭಾಗವತ್ ಅಧ್ಯಯನ ಕೇಂದ್ರದ ನಿರ್ದೇಶಕ ಸಿ.ಕೆ.ರೇಣುಕಾರ್ಯ ತಿಳಿಸಿದರು.

ಸಂಸ್ಥೆಯ ಹಳೆ ವಿದ್ಯಾರ್ಥಿಯಾದ ಇಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಶ್ರೀ ಜಗ್ಗಿ ವಾಸುದೇವ ಅವರು ಅಂದು ಬೆಳಗ್ಗೆ 11 ಗಂಟೆಗೆ ಪುತ್ಥಳಿ ಅನಾವರಣಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅತಿಥಿಯಾಗಿ ಭಾಗವಹಿಸುವರು. ಮಹಾಜನ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಆರ್.ವಾಸುದೇವ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬ್ರಿಟಿಷರ ಆಡಳಿತದಲ್ಲಿ ಶಿಕ್ಷಣಕ್ಕೆ ತೊಂದರೆ ಪಡುತ್ತಿದ್ದ ಕಾಲದಲ್ಲಿ ಅಂಬಳೆ ಸುಬ್ರಹ್ಮಣ್ಯ ಅಯ್ಯರ್ ಅವರು, 1937ರ ಜೂನ್ 12ರಂದು ಲಕ್ಷ್ಮೀಪುರಂನ ತಮ್ಮ ಬಂಗಲೆಯನ್ನೇ ಶಿಕ್ಷಣ ಕಲಿಕೆಗೆ ಉದಾರವಾಗಿ ನೀಡುವ ಮೂಲಕ ಸಂಸ್ಥೆ ಹುಟ್ಟಿಗೆ ಕಾರಣರಾದರು. ಅಲ್ಲದೇ ಅನಾಥಾಲಯ, ಶಾರದ ವಿಲಾಸ ಕಾಲೇಜು, ಬ್ರಾಹ್ಮಣ ಧರ್ಮ ಸಹಾಯ ಸಭೆ, ಹಿಂದಿ ಪ್ರಚಾರ ಸಭೆ, ಹರಿಜನ ಹಾಸ್ಟೆಲ್, ವಾರ್ತಾ ಶಿಕ್ಷಣ ಸಂಸ್ಥೆ, ಸ್ವದೇಶಿ ಸಭಾ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಅಯ್ಯರ್ ನಂತರ ಸಂಸ್ಥೆ ಚುಕ್ಕಾಣಿ ಹಿಡಿದ ರಟ್ಟೆ ಹಳ್ಳಿ ರಾಮಪ್ಪ ಅವರು ಮಹಾಜನ ಸಂಸ್ಥೆ ದೇಶವಿದೇಶಗಳಲ್ಲಿ ಪ್ರಜ್ವಲಿಸುವಂತೆ ಮಾಡಿದರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ರಟ್ಟೆಹಳ್ಳಿಯ ಶ್ರೀಮಂತ ಕುಟುಂಬದಿಂದ ಬಂದಿದ್ದ ರಾಮಪ್ಪನವರು ಸಂಸ್ಥೆಯನ್ನು ಕಟ್ಟಿ ಬೆಳೆಸಲು ಆರ್ಥಿಕ ಭದ್ರತೆ ಹಾಕಿದರು ಎಂದು ತಿಳಿಸಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ವಿಜಯಲಕ್ಷ್ಮೀ ಮುರಳಿಧರ್, ಆಡಳಿತಾಧಿಕಾರಿ ಪ್ರೊ.ಪಿ.ಸರೋಜಮ್ಮ, ಪ್ರಾಧ್ಯಾಪಕ ಪ್ರೊ.ತಿಮ್ಮೇಗೌಡ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: