ದೇಶಪ್ರಮುಖ ಸುದ್ದಿ

ಅಜಿತ್ ದೋವಲ್ ಪುತ್ರನಿಂದ ಮಾನನಷ್ಟ ಮೊಕದ್ದಮೆ: ವಿಚಾರಣೆ ಮುಂದೂಡಿಕೆ

ನವದೆಹಲಿ (ಜ.22): ದಿ ಕ್ಯಾರವಾನ್ ನಿಯತಕಾಲಿಕೆ ಮತ್ತು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ವಿರುದ್ಧ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಪುತ್ರ ವಿವೇಕ್ ಡೊಭಾಲ್ ಹೂಡಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಇಲ್ಲಿನ ನ್ಯಾಯಾಲಯ ಇದೇ 30ಕ್ಕೆ ಮುಂದೂಡಿದೆ.

‘ದಿ ಕ್ಯಾರವಾನ್’ ನಿಯತಕಾಲಿಕೆ ಜನವರಿ 16ರಂದು ತಮ್ಮ ವಿರುದ್ಧ ಪ್ರಕಟಿಸಿದ ಲೇಖನದಿಂದ ಮಾನಹಾನಿಯಾಗಿದೆ ಎಂದು ವಿವೇಕ್ ಕೋರ್ಟ್‌ ಮೆಟ್ಟಿಲೇರಿದ್ದರು. ಲೇಖನ ಪ್ರಕಟಿಸಿದ ನಿಯತಕಾಲಿಕೆ, ಲೇಖಕ ಕೌಶಲ್ ಶ್ರಾಫ್ ಮತ್ತು ಲೇಖನಲ್ಲಿರುವ ಅಂಶಗಳನ್ನು ಜನವರಿ 17ರಂದು ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಿ ಟೀಕಿಸಿದ್ದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ವಿರುದ್ಧ ಹೆಚ್ಚುವರಿ ಮೆಟ್ರಾಪಾಲಿಟನ್ ನ್ಯಾಯಾಲಯದಲ್ಲಿ ವಿವೇಕ್ ದಾವೆ ಹೂಡಿದ್ದರು.

ಲೇಖನದಲ್ಲಿರುವ ಅಂಶಗಳು ಆಧಾರರಹಿತ ಎಂದು ಅವರು ಪ್ರತಿಪಾದಿಸಿದ್ದಾರೆ. ಪ್ರಕರಣದಲ್ಲಿ ವಿವೇಕ್ ಸ್ನೇಹಿತ ನಿಖಿಲ್ ಕಪೂರ್ ಮತ್ತು ಉದ್ಯಮ ಪಾಲುದಾರ ಅಮಿತ್ ಶರ್ಮಾ ಅವರನ್ನು ಸಾಕ್ಷಿಯಾಗಿ ಪರಿಗಣಿಸಲಾಗಿದೆ. ತೆರಿಗೆ ಸ್ವರ್ಗವೆಂದು ಪರಿಗಣಿಸಲಾಗಿರುವ ಕೇಮನ್‌ ದ್ವೀಪದಲ್ಲಿ ವಿವೇಕ್ ಡೊಭಾಲ್ ಹೆಡ್ಜ್‌ ಫಂಡ್‌ ನಿರ್ವಹಿಸುತ್ತಿರುವ ಬಗ್ಗೆ ಜನವರಿ 16ರಂದು ಅಂತರ್ಜಾಲತಾಣದಲ್ಲಿ ಪ್ರಕಟಿಸಿದ ದಿ ಡಿ ಕಂಪನೀಸ್ ಲೇಖನದಲ್ಲಿ ಕ್ಯಾರವಾನ್ ಉಲ್ಲೇಖಿಸಿತ್ತು.

‘2016ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ₹1000 ಮತ್ತು ₹500 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ 13 ದಿನಗಳಲ್ಲಿ ಈ ಹೆಡ್ಜ್‌ ಫಂಡ್‌ ನೋಂದಣಿಯಾಗಿದೆ. ವಿವೇಕ್‌ ಡೊಭಾಲ್ ವ್ಯವಹಾರವು ಅವರ ಸಹೋದರ ಶೌರ್ಯ ಡೊಭಾಲ್ (ಅಜಿತ್‌ ಡೊಭಾಲ್ ಅವರ ಮತ್ತೊಬ್ಬ ಪುತ್ರ) ಉದ್ಯಮದೊಂದಿಗೆ ಬೆಸೆದುಕೊಂಡಿದೆ.

ಬಿಜೆಪಿ ರಾಜಕಾರಣಿ ಮುಖ್ಯಸ್ಥರಾಗಿರುವ ಚಿಂತಕರ ಚಾವಡಿ ‘ಇಂಡಿಯಾ ಫೌಂಡೇಷನ್‌’ ಪ್ರಧಾನಿ ಮೋದಿ ಸರ್ಕಾರದೊಂದಿಗೆ ಆಪ್ತತೆ ಹೊಂದಿದ್ದು, ಶೌರ್ಯ ಡೊಭಾಲ್ ಈ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಲೇಖನದಲ್ಲಿ ಬರೆದಿರುವಂತೆ ತಮ್ಮಿಂದ ಕಾನೂನುಬಾಹಿರ ಚಟುವಟಿಕೆ ನಡೆದಿಲ್ಲ. ಆದರೆ ಇಡೀ ಬರಹದಲ್ಲಿ ತಪ್ಪು ಮಾಡಿದ್ದೇನೆ ಎಂಬಂತೆ ಬಿಂಬಿಸಲಾಗಿದೆ ಎಂದು ವಿವೇಕ್ ಆರೋಪಿಸಿದ್ದಾರೆ.

‘ಓದುಗರನ್ನು ಗೊಂದಲಕ್ಕೀಡುಮಾಡುವಂತೆ ಮತ್ತು ದೊಡ್ಡ ಸಂಚು ಇದೆ ಎಂಬಂತೆ ಲೇಖನದ ಪ್ರತಿಯೊಂದು ಪ್ಯಾರಾದಲ್ಲಿಯೂ ಬಿಂಬಿಸಲಾಗಿದೆ. ನಿಯತಕಾಲಿಕೆಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್‌ ಮಾಡಲಾಗಿರುವ ಲೇಖನದ ತುಣುಕುಗಳೂ ಡೊಭಾಲ್ ಕುಟುಂಬದ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿದೆ. ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಲಾಭ ಪಡೆಯಲು ಉದ್ದೇಶಿಸಿದಂತೆ ಇದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಪುತ್ರನ ಚಿಂತಕರ ಚಾವಡಿಗೆ ವಿದೇಶಿ ದೇಣಿಗೆ; ಆರ್ಥಿಕ ಮೂಲದ ಬಗ್ಗೆ ಮಾಹಿತಿಯೂ ಇಲ್ಲ. (ಎನ್.ಬಿ)

Leave a Reply

comments

Related Articles

error: