ಪ್ರಮುಖ ಸುದ್ದಿಮೈಸೂರು

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ; ಮಕರ ಸಂಕ್ರಮಣ ಪುಣ್ಯಕಾಲದ ಮಹತ್ವ ಅರಿಯೋಣ

ಸೂರ್ಯದೇವನು ವರ್ಷಕ್ಕೆ 12 ಬಾರಿ ಪಥ ಬದಲಾಯಿಸುತ್ತಾನಾದರೂ ದಕ್ಷಿಣದಿಂದ ಉತ್ತರಕ್ಕೆ ಬದಲಾಗುವ ಮಕರ ಸಂಕ್ರಮಣ ಕಾಲ ಭಾರತದಲ್ಲಿ ಹಲವು ಕಾರಣಕ್ಕೆ ಪವಿತ್ರ ಸಮಯವಾಗಿದೆ. ಸೂರ್ಯದೇವನು ಉತ್ತರಕ್ಕೆ ಪಥ ಬದಲಾಯಿಸುವ ಪುಣ್ಯಕಾಲವೇ ಉತ್ತರಾಯಣ.

ಉತ್ತರಾಯಣ ಕಾಲ ಆರಂಭವಾದ ಮೇಲೆ ಮಾಗಿಯ ಚಳಿ ಮಾಯವಾಗಿ ಬಿಸಿ ಅನುಭವ ಹೆಚ್ಚಾಗುತ್ತಾ ಸಾಗುತ್ತದೆ. ಏಕೆಂದರೆ ಈ ನಂತರ ದಿನದಲ್ಲಿ ರಾತ್ರಿ ಕಡಿಮೆಯಾಗಿ ಹಗಲು ಹೆಚ್ಚಾಗುತ್ತದೆ.

ಪುರಾಣೈತಿಹ್ಯಗಳೂ ಮಕರ ಸಂಕ್ರಮಣ ಕುರಿತು ಈ ಕಾಲದ ಮಹತ್ವ ಕುರಿತು ಸಾರಿ ಹೇಳುತ್ತವೆ. ಶಿವ-ಪಾರ್ವತಿಯರ ವಿವಾಹ ಕೃತಯುಗದಲ್ಲಿ ಜರುಗಿದ್ದೂ ಉತ್ತರಾಯಣದಲ್ಲೇ. ಬ್ರಹ್ಮದೇವನು ಸೃಷ್ಟಿಕಾರ್ಯ ಪ್ರಾರಂಭಿಸಿದ್ದು, ಇಂದ್ರನ ಶಾಪ ವಿಮೋಚನೆಯಾಗಿದ್ದು, ನಾರಾಯಣನು ವರಾಹ ಅವತಾರವೆತ್ತಿದ್ದು, ಸಮುದ್ರ ಮಥನ ಕಾಲದಲ್ಲಿ ಮಹಾಲಕ್ಷ್ಮೀದೇವಿ ಅವತಾರವೆತ್ತಿದ್ದು ಉತ್ತರಾಯಣ ಕಾಲದಲ್ಲೇ.

ಮಹಾಭಾರತ ಯುದ್ಧದಲ್ಲಿ ಅರ್ಜುನನ ಬಾಣಗಳಿಂದ ಗಾಯಗೊಳ್ಳುವ ಇಚ್ಛಾಮರಣಿ ಭೀಷ್ಮಪಿತಾಮಹರು ಉತ್ತರಾಯಣ ಕಾಲದ ಆರಂಭದಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆಯಿಂದ ಉತ್ತರಾಯಣ ಕಾಲಕ್ಕಾಗಿ ಕಾದು ಮರಣನ್ನಪ್ಪುವರು.

ಹಿಗ್ಗಿನ ಹಬ್ಬ ಸಂಕ್ರಾತಿ ಹಬ್ಬ ರೈತರ ಹಬ್ಬ ಮಹಿಳೆಯರ ಮತ್ತು ಮಕ್ಕಳ ಹಬ್ಬವೂ ಆಗಿರುವುದು ವಿಶೇಷವಾಗಿದೆ. ಈ ಮೂಲಕ ಶುಭದಿನಗಳು ಇಂದಿನಿಂದ ಆರಂಭವಾಗುತ್ತದೆ. ಸಂಕ್ರಾಂತಿ ಹಬ್ಬ ಬರುವ ವೇಳೆಗೆ ಸುಗ್ಗಿಯ ಕಾಲವು ಆರಂಭವಾಗುತ್ತದೆ. ಸಂಕ್ರಾಂತಿಯಂದು ಕಣಪೂಜೆ ಮಾಡಿದ ನಂತರವೇ ರೈತರು ಭತ್ತ-ರಾಗಿ, ದವಸ-ಧಾನ್ಯಗಳನ್ನು ಕಣದಲ್ಲಿ  ಒಟ್ಟು ಮಾಡಿ ಪೂಜೆ ಮಾಡುವರು. ಎಳ್ಳು ಬೆಲ್ಲವ ಮೆದ್ದು ಒಳ್ಳೆಯ ಮಾತನಾಡು ಎಂಬ ಮಾತನ್ನು ಇಂದಿನಿಂದ ಆಚರಣೆ ತರಲು ಪ್ರಯತ್ನಿಸಲಾಗುತ್ತದೆ.

ರೈತರ ಈ ಹಬ್ಬ ವೈಜ್ಞಾನಿಕವಾಗಿಯೂ ಮಹತ್ವ ಪಡೆದಿದೆ. ಜಾನುವಾರುಗಳಿಗೆ ಅಲಂಕರಿಸುವುದು, ಕಿಚ್ಚಾಯಿಸುವುದು. ಈ ದಿನದ ಮತ್ತೊಂದು ವಿಶೇಷ. ಆಳೆತ್ತರದ ಕಿಚ್ಚಿ ನೊಳಗೆ ಜಾನುವಾರುಗಳನ್ನು ಕಿಚ್ಚು ಹಾಯಿಸುವುದನ್ನು ನೋಡುವುದೇ ಒಂದು ಸಂಭ್ರಮ. ನಮ್ಮ ವೇದ-ಉಪನಿಷತ್ತುಗಳು ಸಂಕ್ರಾಂತಿಯ ಮಹತ್ವನ್ನು ಸಾರಿ ಹೇಳಿವೆ. ಆದ್ದರಿಂದ ಮಕರ ಸಂಕ್ರಾಂತಿ ಹಲವು ವಿಧಗಳಿಂದ ಭಾರತೀಯ ಸಂಸ್ಕತಿಯಲ್ಲಿ ತನ್ನದೇ ಆದ ಮಹತ್ವವನ್ನು ಪಡೆದಿದೆ.

ಮಕರ ಸಂಕ್ರಾತಿ ಬರುವುದು ಹೇಮಂತ ಋತುವಿನಲ್ಲ್ಲಿ. ಬರಡಾಗಿರುವ ಪ್ರಕೃತಿಯಲ್ಲಿ ನವ ಚೈತನ್ಯ ಹೊಮ್ಮುವಂತೆ ಮಾಡುವ ಈ ಹಬ್ಬ. ಹಿಂದೂ ಪಂಚಾಂಗದ ಪ್ರಕಾರ ಹನ್ನೆರಡು ಸೌರಮಾಸಗಳಲ್ಲಿ ಮಕರ ಸಂಕ್ರಮಣವೂ ಒಂದು. ಸೂರ್ಯನು ಒಂದು ರಾಶಿಯ ವ್ಯಾಪ್ತಿಯಿಂದ ಮತ್ತೊಂದು ರಾಶಿಗೆ ಉಪಕ್ರಮಿಸುವ ಹಂತವೇ ಸಂಕ್ರಮಣ ಅಥವಾ ಸಂಕ್ರಾಂತಿ ನಮ್ಮಲ್ಲರಿಗೂ ಬೆಳಕಿನ ಸೆಲೆಯಾದ ಸೂರ್ಯ ಪ್ರತಿ ದಿನವೂ ನಮಗೆ ಪೂರ್ವದಲ್ಲಿ ಹುಟ್ಟುವಂತೆ ಕಾಣುತ್ತಾನಾದರೂ ವರ್ಷದ ಅರ್ಧಕಾಲ ಪೂರ್ವದಿಂದ ಉತ್ತರಕ್ಕೂ ಇನ್ನರ್ಧ ಕಾಲ ದಕ್ಷಿಣದಿಂದ ಉತ್ತರಕ್ಕೂ ಚಲಿಸುತ್ತಾನೆ. ಧನು ರಾಶಿಯಿಂದ ಮಕರ ರಾಶಿಯೆಡೆಗೆ ಸೂರ್ಯನ ಪಯಣ ಆರಂಭವಾಗುತ್ತದೆ.

ಕೃಷಿ ಮತ್ತು ಪಶುಪಾಲನೆ ಪ್ರಮುಖವಾಗಿರುವ ನಮ್ಮ ದೇಶದ ಜನತೆ ಈ ಕಾಲವನ್ನು ಪುರಾತನದಿಂದಲೂ ಸಂಭ್ರಮದಿಂದಲೇ ಸ್ವಾಗತಿಸುತ್ತಾ ಬಂದಿದ್ದರು. ಹಾಗಾಗಿ ಧಾರ್ಮಿಕವಾಗಿ, ವೃತ್ತಿ ಸಂಕೇತಾಗಿ, ಹವಾಮಾನಕ್ಕನುಗುಣ ವಾಗಿ ಶ್ರೇಷ್ಠವಾದ ಈ ಉತ್ತರಾಯಣ ಭಾರತೀಯರಿಗೆ ಹಬ್ಬವಾಗಿ ಪರಿಣಮಿಸಿತು ಎನ್ನುವುದು.

ಹಗಲು ಕಡಿಮೆ-ರಾತ್ರಿ ಹೆಚ್ಚಿರುವ ಚಳಿಗಾಲದಲ್ಲಿ ಬರುವ ಹಬ್ಬ ಮನುಷ್ಯರಿಗೆ ಶೀತ-ವಾತ ಸಂಬಂಧೀ-ಕಾಯಿಲೆಗಳು ಕಾಡುತ್ತವೆ. ಈ ದಿನಗಳಲ್ಲಿ ಚಳಿ ಹೆಚ್ಚು. ಆದ್ದರಿಂದ ದೇಹ ಜಡಗೂಡಿರುತ್ತದೆ. ದೇಹದ ಕೊಬ್ಬಿನಾಂಶ ನಷ್ಟಗೊಂಡಿರುತ್ತದೆ. ಅದನ್ನು ಮತ್ತೆ ಸಂಚಯಗೊಳಿಸಲು ಸಂಕ್ರಾಂತಿ ಕಾರಣವಾಗುತ್ತದೆ.

ಸಂಕ್ರಾಂತಿ ಎಳ್ಳು ಬೆಲ್ಲದ ಹಬ್ಬ. “ಎಳ್ಳು” ದಾನ ಇಂದಿನ ಶ್ರೇಷ್ಠಕಾರ್ಯ. ಹಾಗಾಗಿ ಸಂಕ್ರಾಂತಿ ಹಬ್ಬವೆಂದರೆ ಎಳ್ಳು-ಬೆಲ್ಲದ ಹಬ್ಬವೆಂದೇ ಪ್ರತೀತಿ.

ವೈಜ್ಞಾನಿಕವಾಗಿಯೂ ಈ ಹಬ್ಬಕ್ಕೆ ವಿಶಿಷ್ಟ ಸ್ಥಾನವಿದೆ. ಎಳ್ಳು ಮತ್ತು ಬೆಲ್ಲ, ಅದರೊಂದಿಗಿರುವ ಕೊಬ್ಬರಿ, ಕಡಲೆಬೀಜ, ಸಕ್ಕರೆ, ಅಚ್ಚು ಕಬ್ಬು ಮುಂತಾದುವುಗಳು ದೇಹದ ಶೀತ-ವಾತ ಸಂಭಂದಿ ಕಾಯಿಲೆಯನ್ನೂ ನಿವಾರಿಸುವುದಲ್ಲದೇ, ಎಣ್ಣೆ ಅಂಶನ್ನು ದೇಹದಲ್ಲಿ ಹೆಚ್ಚಿಸುತ್ತದೆ. ಚರ್ಮದ ಕಿರಿಕಿರಿ ತಪ್ಪುತ್ತದೆ. ಶಕ್ತಿ ಸಂಚಾರ ಹೆಚ್ಚಾಗುತ್ತದೆ. ಋತುಮಾನಕ್ಕನುಗುಣವಾಗಿ ಪೋಷಕ ಸತ್ವಗಳು ನಮಗೆ ದೊರಕುವುದಲ್ಲದೆ, ಆರೋಗ್ಯ ಸುಧಾರಣೆಗೆ ಸಂಕ್ರಾಂತಿ ನಮಗರಿವಿಲ್ಲದೆಯೇ ಬಿಗಿಗೊಂಡಿದ್ದ ದೇಹ ಸಡಿಲಗೊಳ್ಳುತ್ತದೆ. ಮನಸ್ಸು ಹಗುರವಾಗುತ್ತದೆ. ಆದ್ದರಿಂದ ಎಳ್ಳು ತಿಂದು ಒಳ್ಳೆ ಮಾತಾಡು ಎಂಬ ನಾಣ್ಣುಡಿ ಬಳಕೆಗೆ ಬಂದಿರುವುದು.

ಎಳ್ಳು ಸ್ನೇಹದ ಸಂಕೇತ. ಜಿಡ್ಡು ಎಲ್ಲವನ್ನು ಅಂಟಿಸಿ ಕೊಳ್ಳುವ ಸಂಕೇತ, ಈ ಗುಣಗಳು ನಮ್ಮಲ್ಲೂ ಉಳಿಯಲ್ಲ ಎಂಬ ಒಳಾರ್ಥವನ್ನು ಸಂಕ್ರಾಂತಿಯ ಕುಸರೆಳ್ಳು, ನಗು ಎಳ್ಳು ಧ್ವನಿಸುತ್ತವೆ. ಆದ್ದರಿಂದ ಇಂದು ಹೆಂಗಳೆಯರು- ನಾಡಿನಾದ್ಯಂತ ಎಳ್ಳು-ಬೆಲ್ಲ ಹಂಚಿ ಸ್ನೇಹಕ್ಕೆ ಕೈ ಚಾಚುತ್ತಾರೆ.

ಭಗವಾನ್ ಸೂರ್ಯದೇವರೇ ರಾಶಿಗತಿಯನ್ನು ಬದಲಿಸಿ ಜನಜೀವನ ರೀತಿ ನಿರ್ದೇಶಿಸುವ ಶುಭ ಗಳಿಗೆ. ಇಂಇನಿಂದ ಹಗಲು ಹೆಚ್ಚಾಗಿ ಕತ್ತಲಿನ ಸಮಯ ಕಡಿಮೆಯಾಗುತ್ತದೆ. ಕಾಡುವ ಹೇಮಂತ ಶಿಶಿರವ ಹಿಂದಿಕ್ಕಲು ಪ್ರಬಲವಾಗುತ್ತ ವಸುಂಧರೆಗೆ ಪ್ರಿಯನಾದ ಚೈತ್ರನನ್ನು ಕರೆತರಲು ವಿಧ್ಯುಯುಕ್ತನಾಗುತ್ತಾನೆ ಸೂರ್ಯ.

ಕೊಯ್ಲಿಗೆ ಸಿದ್ಧವಾದ ಪೈರಿನ ಕೆಲವು ತೆನೆಗಳನ್ನು ಸಾಂಕೇತಿಕವಾಗಿ ಕೊಯ್ದು ತಂದು ಕೆಲವು ಕಾಳುಗಳನ್ನು ಹಾಕಿ ಪಾಯಸ ಮಾಡಿದರೆ ಉಪಯೋಗಿಸುವ ಮುನ್ನ ಧಾನ್ಯ ಪೂಜೆ ನಡೆದಂತೆ ಎನ್ನುವ ನಂಬಿಕೆ.

ಪ್ರಕೃತಿಯಲ್ಲಿ ದೊರೆಯುವ ಸಂಪತ್ತು ವಿಶೇಷಗಳನ್ನು ಉಪಯೋಗಿಸಿಕೊಂಡು ನಮ್ಮ ಬದುಕನ್ನು ಸೂಕ್ತ ರೀತಿಯಲ್ಲಿ ತಿದ್ದಿಕೊಳ್ಳುವುದೇ ಹಬ್ಬಗಳ ಪರಮಾರ್ಥ. ಮಕರ ಸಂಕ್ರಾಂತಿ ಸೌರಮಾನದ ಹಬ್ಬ. ಧಾರ್ಮಿಕ ಮಹತ್ವದ ಉತ್ತರಾಯಣ ಪ್ರಾರಂಭವು ದೇವತೆಗಳಿಗೆ ಅತ್ಯಂತ ಪ್ರಿಯವಾದ ಕಾಲ. ಮಂಗಳ ಕಾರ್ಯಗಳನ್ನು ಮಾಡಲು ಪ್ರಶಸ್ತ. ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಅತಿ ಪುಣ್ಯಕರ.

ಏನೇ ವೈಮನಸ್ಸು ಇದ್ದರೂ ಮರೆತು ಒಂದಾಗಿ ಬಾಳೋಣವೆಂದು ಶಪಥ ತೊಟ್ಟು ಹೊಸ ಪಥದಲ್ಲಿ ಸಾಗುವುದಕ್ಕೆ ಮುನ್ನುಡಿ ಇಡುವ ಹಬ್ಬ ಸಂಕ್ರಾಂತಿ. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ.

Leave a Reply

comments

Related Articles

error: