ಪ್ರಮುಖ ಸುದ್ದಿ

ಮಡಿಕೇರಿಯಲ್ಲಿ ಶ್ರದ್ಧಾಂಜಲಿ ಸಭೆ : ಡಾ.ಶ್ರೀಶಿವಕುಮಾರ ಸ್ವಾಮೀಜಿ ಸಿದ್ಧಿ ಪುರುಷರು : ಗಣ್ಯರ ಕಂಬನಿ

ರಾಜ್ಯ(ಮಡಿಕೇರಿ) ಜ.23 :- ಶ್ರೀ ಸಿದ್ಧಗಂಗಾ ಕ್ಷೇತ್ರದ ಡಾ.ಶಿವಕುಮಾರ ಸ್ವಾಮೀಜಿಗಳು ತ್ರಿವಿಧ ದಾಸೋಹದ ಕಾಯಕ ನಿಷ್ಠೆಯ ಮೂಲಕ ತಮ್ಮ ಜೀವಿತಾವಧಿಯಲ್ಲಿ ಇಡೀ ಜನಸಮುದಾಯವನ್ನು ಪ್ರಭಾವಿಸಿದ ಸಿದ್ಧಿ ಪುರುಷರಾಗಿದ್ದರೆ ಎಂದು   ಕಾಯಕ ಯೋಗಿ ಬಗ್ಗೆ ಗಣ್ಯರು ಕಂಬನಿ ಮಿಡಿದಿದ್ದಾರೆ.

ಕೊಡಗು ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್ ಮತ್ತು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆದ ‘ಶ್ರದ್ಧಾಂಜಲಿ’ ಸಭೆಯಲ್ಲಿ, ನಡೆದಾಡುವ ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮೌನಾಚರಣೆಯ ಮೂಲಕ ಗೌರವ ನಮನವನ್ನು ಸಲ್ಲಿಸಲಾಯಿತು.

ಪತ್ರಿಕಾ ಭವನ ಟ್ರಸ್ಟ್‍ ನ ಸ್ಥಾಪಕಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಜಾತಿ, ಮತ, ಧರ್ಮಗಳ ಎಲ್ಲೆಯನ್ನು ಮೀರಿ ವಿದ್ಯಾದಾನದ ಮೂಲಕ ಶ್ರೀ.ಡಾ. ಶಿವಕುಮಾರ ಸ್ವಾಮೀಜಿಗಳು ಸಿದ್ಧಗಂಗೆಯನ್ನು ಜ್ಞಾನ ಗಂಗೆಯನ್ನಾಗಿಸಿ ಮಹಾಮಹಿಮರಾಗಿದ್ದಾರೆ. 12ನೇ ಶತಮಾನದ ಬಸವಣ್ಣನವರ ಬಳಿಕ ಕಾಯಕ ನಿಷ್ಟೆಯ ಮಹತ್ವವನ್ನು ಜನಸಮುದಾಯಕ್ಕೆ ತಲುಪಿಸಿದ ಮತ್ತೋರ್ವ ಮಹಾನ್ ವ್ಯಕ್ತಿಯಾಗಿ ಡಾ. ಶಿವಕುಮಾರ ಸ್ವಾಮೀಜಿಗಳು ಕಾಣಿಸಿಕೊಳ್ಳುತ್ತಾರೆಂದು ಅಭಿಪ್ರಾಯಿಸಿದರು.

ಶ್ರೀ ಸಿದ್ಧಗಂಗಾ ಕ್ಷೇತ್ರದ ಪೀಠಾಧಿಪತಿಗಳಾದ ಬಳಿಕ ಡಾ. ಶಿವ ಕುಮಾರ ಸ್ವಾಮೀಜಿಗಳು 26 ಸಂಸ್ಕೃತ ಪಾಠ ಶಾಲೆ, 58 ಪ್ರಾಥಮಿಕ ಶಾಲೆ, 8 ಪದವಿ ಪೂರ್ವ ಕಾಲೇಜು, ಒಂದು ಇಂಜಿನಿಯರಿಂಗ್ ಕಾಲೇಜು, 2 ಅಂಧರ ಶಿಕ್ಷಣ ಸಂಸ್ಥೆ ಮತ್ತು ಒಂದು ವಿಕಲಾಂಗರ ಶಿಕ್ಷಣ ಸಂಸ್ಥೆ ಸೇರಿದಂತೆ ಒಟ್ಟು 126 ಶಿಕ್ಷಣ ಸಂಸ್ಥೆಗಳ ಮೂಲಕ ಸಹಸ್ರ ಸಹಸ್ರ ಮಂದಿಗೆ ಶಿಕ್ಷಣವನ್ನು ಧಾರೆ ಎರೆದ ಮಹಾ ಪುರುಷರಾಗಿದ್ದಾರೆ. ನಾವುಗಳು ಯಾರೂ ದೇವರನ್ನು ಕಂಡಿಲ್ಲವಾದರು, ಡಾ. ಶಿವಕುಮಾರ ಸ್ವಾಮೀಜಿಗಳ ಮೂಲಕ ನಡೆದಾಡುವ ದೇವರನ್ನು ಕಾಣುವ ಭಾಗ್ಯವನ್ನು ಪಡೆದವರೆಂದು ನುಡಿದರು.

ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ನುಡಿ ನಮನವನ್ನು ಸಲ್ಲಿಸುತ್ತಾ, ಡಾ. ಶಿವ ಕುಮಾರ ಸ್ವಾಮೀಜಿಗಳು ತಮ್ಮ ನಡೆ, ನುಡಿಗಳ ಮೂಲಕ ಲಕ್ಷಾಂತರ ಮಂದಿಯ ಬಾಳಿನ ಪಥಕ್ಕೆ ಬೆಳಕಾಗಿದ್ದರು. ಅಕ್ಷರ, ಆಶ್ರಯ ಮತ್ತು ಅನ್ನದಾಸೋಹದ ಮೂಲಕ ಕಾಯಕ ನಿಷ್ಟೆಯನ್ನು ಸಮಾಜಕ್ಕೆ ಪಸರಿಸಿದ್ದ ಸ್ವಾಮೀಜಿಗಳು, ತಾವು ಲಿಂಗೈಕ್ಯರಾದ ಸಂದರ್ಭ ಆ ಮಾಹಿತಿಯನ್ನು ಮಕ್ಕಳಿಗೆ ಅನ್ನದಾಸೋಹದ ಬಳಿಕವಷ್ಟೆ ತಿಳಿಸುವ ಮೂಲಕ ದೊಡ್ಡ ತನವನ್ನು ಮೆರೆದ ಮಹಾಮಹಿಮರೆಂದು ಬಣ್ಣಿಸಿದರು.

ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್.ಮನು ಶೆಣೈ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಗಳ ಜೀವಿತಾವಧಿಯ ಕಾಯಕ ನಿಷ್ಟೆ ಸರ್ವರಿಗೂ ಸ್ಫೂರ್ತಿದಾಯಕವೆಂದರು.

ಸಮಾಜ ಸೇವಕ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ನಡೆದಾಡುವ ದೇವರೆಂದೇ ಪ್ರಖ್ಯಾತರಾದ ಡಾ. ಶಿವ ಕುಮಾರ ಸ್ವಾಮೀಜಿಗಳು ಯಾವುದೇ ಜಾತಿ ಮತಗಳ ಹಂಗಿಲ್ಲದೆ ಎಲ್ಲರೊಂದಿಗೂ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ ಮಹಾನ್ ವ್ಯಕ್ತಿಯಾಗಿದ್ದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಬಳಗದ ಪದಾಧಿಕಾರಿ ಬಿ.ಎ.ಷಂಶುದ್ದೀನ್ ಮಾತನಾಡಿ ಡಾ.ಶಿವಕುಮಾರ್ ಸ್ವಾಮಿ ಸರ್ವಧರ್ಮೀಯರಿಂದ ಗೌರವ ಪಡೆದಿದ್ದರು, ಮಹಾಪುರುಷನಿಗೆ ‘ಭಾರತ ರತ್ನ’ವನ್ನು ನೀಡುವಲ್ಲಿ ಕೇಂದ್ರ ಸರ್ಕಾರ ಎಡವಿದೆ ಎಂದು ವಿಷಾದಿಸಿದರು. ತ್ರಿವಿಧ ದಾಸೋಹಿಗಳಾಗಿದ್ದ ಸ್ವಾಮೀಜಿ ಅಸ್ಪೃಶ್ಯತೆಯ ನಿವಾರಣೆಯತ್ತಲೂ ಹೆಚ್ಚಿನ ಒತ್ತು ನೀಡಿದ್ದರೆಂದು ಅಭಿಪ್ರಾಯಪಟ್ಟರು.

ಉಪನ್ಯಾಸಕಿ ಡಾ.ಅವನಿಜ ಸೋಮಯ್ಯ ಮಾತನಾಡಿ, ಸ್ವಾಮೀಜಿಗಳು ಅಗಾಧ ಚೈತನ್ಯದ ಚಿಲುಮೆಯೇ ಆಗಿದ್ದರು. ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳ ಅಳವಡಿಕೆಯ ಮೂಲಕ ಆಲಸ್ಯವನ್ನು ಕಳೆದುಕೊಂಡು ಕಾಯಕ ನಿಷ್ಠೆಯತ್ತ ಒಲವನ್ನು ತೋರಬೇಕೆಂದರು.

ಅಲ್ಲಾರಂಡ ರಂಗ ಚಾವಡಿಯ ಪ್ರಮುಖ ಅಲ್ಲಾರಂಡ ವಿಠಲ ನಂಜಪ್ಪ ಮಾತನಾಡಿ, ಸ್ವಾಮೀಜಿಗಳು ಕಾಯಕ ನಿಷ್ಟೆಯ ಜೊತೆಯಲ್ಲೆ ಮಠದ ಚೌಕಟ್ಟಿನ ಒಳಗೇ ನ್ಯಾಯ ತೀರ್ಮಾನವನ್ನೂ ಮಾಡುವ ಮೂಲಕ ಸೌಹಾರ್ದದ ಬದುಕಿಗೆ ಒತ್ತು ನೀಡುತ್ತಿದ್ದರು ಎಂದು ಶ್ಲಾಘಿಸಿದರು.

ಸಭೆಯಲ್ಲಿ ಬಳಗದ ಸದಸ್ಯ ಲಿಯಾಕತ್ ಆಲಿ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಿಕಾ ಭವನ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಟ್ರಸ್ಟಿ ಕೆ.ತಿಮ್ಮಪ್ಪ, ಪತ್ರಕರ್ತರುಗಳಾದ ವಿಘ್ನೇಶ್ ಭೂತನಕಾಡು, ರಾಕೇಶ್, ಉದಯ್ ಮೊಣ್ಣಪ್ಪ, ರವಿ, ಪ್ರಸಾದ್ ಸಂಪಿಗೆ ಕಟ್ಟೆ, ಮೋಹನ್, ವಿಕಾಸ್, ಲೋಹಿತ್, ಜಯಂತಿ, ವಿಶ್ಮ ಮೊದಲಾದವರು ಪಾಲ್ಗೊಂಡಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: