ಮೈಸೂರು

ದೇವಸ್ಥಾನದ ಹುಂಡಿಯ ಹಣ ದೋಚಿದ ಕಳ್ಳರು

ಮೈಸೂರಿನಲ್ಲಿ ಸಂಕ್ರಾಂತಿ ಹಬ್ಬದ  ಸಡಗರದಲ್ಲಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಹಬ್ಬದ  ದಿನವೇ  ದೇವಾಲಯವೊಂದಕ್ಕೆ ನುಗ್ಗಿದ ಕಳ್ಳರು  ಕಳ್ಳತನ ನಡೆಸಿದ ಘಟನೆ ನಡೆದಿದೆ.
ನಗರದ ತ್ಯಾಗರಾಜ ರಸ್ತೆಯಲ್ಲಿ ಶ್ರೀ ಚಿಕ್ಕಾಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ಕಳ್ಳತನ ನಡೆದಿದೆ.
ದೇವಾಲಯದ ಮುಖ್ಯದ್ವಾರವನ್ನು ಕಬ್ಬಿಣದ ಹಾರೆಯಿಂದ ಮೀಟಿದ ದುಷ್ಕರ್ಮಿಗಳು ದೇವಾಲಯದೊಳಕ್ಕೆ ಪ್ರವೇಶಿಸಿ ಅಲ್ಲಿ ಇಡಲಾಗಿದ್ದ ಹುಂಡಿಯ ಬೀಗವನ್ನು ಒಡೆದು ಅದರಲ್ಲಿ ಸಂಗ್ರಹಗೊಂಡಿದ್ದ ಸುಮಾರು 50 ಸಾವಿರ ರೂ. ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಶನಿವಾರ  ಬೆಳಿಗ್ಗೆ ಎಂದಿನಂತೆ ಅರ್ಚಕರು ದೇವಾಲಯವನ್ನು ತೆರೆಯಲು ಬಂದ ಸಂದರ್ಭದಲ್ಲಿ ದೇವಾಲಯದಲ್ಲಿ ಕಳ್ಳತನವಾಗಿರುವುದು ಅವರ ಗಮನಕ್ಕೆ ಬಂದಿದೆ. ಕೂಡಲೇ ಅರ್ಚಕರು ಕೆ.ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದೂರನ್ನು ಸ್ವೀಕರಿಸಿದ ಕೆ.ಆರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಕಾಶ್, ಸಬ್ ಇನ್ಸ್ ಪೆಕ್ಟರ್ ಸುನೀಲ್ ಬೆರಳಚ್ಚು ತಂಡ ಹಾಗೂ ಶ್ವಾನ ದಳದೊಂದಿಗೆ ದೇವಾಲಯಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ನಂತರ ದುಷ್ಕರ್ಮಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ

Leave a Reply

comments

Related Articles

error: