ಪ್ರಮುಖ ಸುದ್ದಿ

ಗಾಂಜಾ ಬೀಜಗಳನ್ನು ಮಾರಾಟ ಮಾಡುತ್ತಿದ್ದ ಸೂಡಾನ್ ಮೂಲದ ಇಂಜಿನಿಯರ್‌ ಬಂಧನ

ರಾಜ್ಯ(ಬೆಂಗಳೂರು)ಜ.23:-  ಗಾಂಜಾ ಬೀಜಗಳನ್ನು ಮಾರಾಟ ಮಾಡುತ್ತಿದ್ದ ಸೂಡಾನ್ ಮೂಲದ ಇಂಜಿನಿಯರ್‌ನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸೂಡಾನ್‌ನ ಕತ್ರುಮ್‌ನ ಅಹ್ಮದ್ ಮೂಸ (26) ಬಂಧಿತ ಆರೋಪಿಯಾಗಿದ್ದಾನೆ. ಸಿಡೇದಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದ ಮೂಸ, ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದಿದ್ದ. ಆಚಾರ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ ಪ್ರಕರಣ ಎದುರಿಸುತ್ತಿದ್ದ ಮೂಸ, ವೀಸಾ ಅವಧಿ ಮುಗಿದಿದ್ದರೂ ಪ್ರಕರಣದ ಕಾರಣಕ್ಕಾಗಿ ನಗರದಲ್ಲೇ ಉಳಿದುಕೊಂಡಿದ್ದ.

ಗಾಂಜಾ ಬೀಜಗಳನ್ನು ಬೇರೆಡೆಯಿಂದ ತಂದು ಗಿರಾಕಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಆರೋಪಿಯು ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದ. ಗಾಂಜಾ ವ್ಯಸನಿಯೊಬ್ಬ ನೀಡಿದ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದ ಸೋಲದೇವನಹಳ್ಳಿ ಪೊಲೀಸ್ ಇನ್ಸಪೆಕ್ಟರ್ ವೆಂಕಟೇಗೌಡ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಂಜಾ ಬೀಜಗಳು, ಗಾಂಜಾ ಸೊಪ್ಪಿಗಿಂತ ಹೆಚ್ಚು ಬೇಡಿಕೆ ಹೊಂದಿದ್ದು, ಅವುಗಳನ್ನು ಕುಟ್ಟಿ ಪುಡಿ ಮಾಡಿ ಸೇವಿಸಿ ಅಮಲಿನಲ್ಲಿ ತೇಲುವ ಚಟವನ್ನು ಗಾಂಜಾ ವ್ಯಸನಿಗಳು ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: