ದೇಶಪ್ರಮುಖ ಸುದ್ದಿ

ಗಣರಾಜ್ಯೋತ್ಸವ ಪರೇಡ್‍ಗೆ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಸ್ತಬ್ಧಚಿತ್ರ, ಕನ್ನಡ ಗೀತೆ

ನವದೆಹಲಿ (ಜ.23): ಗಣರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ನವದೆಹಲಿಯ ರಾಜಪಥ ರಸ್ತೆ ಸಿದ್ಧಗೊಳ್ಳುತ್ತಿದೆ. ಪ್ರತಿಬಾರಿಯಂತೆ ಈ ಬಾರಿಯೂ ಕೂಡ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಲಿದೆ. ಈ ಬಾರಿ ವಿಶೇಷ ಏನೆಂದರೆ ಗಾಂಧೀಜಿ ಮತ್ತು ಬೆಳಗಾವಿ ಕಾಂಗ್ರೆಸ್ ಅಧಿವೇಶನ. ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಕರ್ನಾಟಕದಿಂದಲೂ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಭರ್ಜರಿ ತಯಾರಿ ನಡೆದಿದೆ. ಸತತ ಹತ್ತು ವರ್ಷಗಳು ರಾಜಪಥ್ ರಸ್ತೆಯಲ್ಲಿ ಕರ್ನಾಟಕದ ತೇರು ಓಡಿಸಲು ಅವಕಾಶ ಸಿಕ್ಕಿದ್ದು ಈ ಬಾರಿಯೂ ರಾಜ್ಯದ ಸಂಸ್ಕೃತಿ ಅನಾವರಣಗೊಳ್ಳಲಿದೆ. 1924ರಲ್ಲಿ ಮೊದಲ ಬಾರಿ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ನ 39ನೇ ಬೆಳಗಾವಿ ಅಧಿವೇಶನದ ಕಥಾವಸ್ತುವನ್ನು ಕರ್ನಾಟಕ ಆಯ್ಕೆ ಮಾಡಿದ್ದು, ಕಲಾ ನಿರ್ದೇಶಕ ಶಶಿಧರ್ ಹಡಪಾ ನೇತೃತ್ವದಲ್ಲಿ 50 ಮಂದಿ ಕಲಾವಿದರು ರಚಿಸಿರುವ ರಾಜ್ಯದ ಸ್ತಬ್ಧ ಚಿತ್ರ ಕಣ್ಮನ ಸೆಳೆಯುತ್ತಿದೆ.

1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಚಿತ್ರಣ ಟ್ಯಾಬ್ಲೊ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದು ಅಧಿವೇಶನದಲ್ಲಿ ಗಾಂಧಿ ಮಾಡಿದ ಭಾಷಣದ ವೇದಿಕೆ ಮತ್ತು ವೇದಿಕೆಯ ಸುತ್ತ ಬಸವಣ್ಣ ಮತ್ತು ಕೃಷ್ಣರಾಜ ಒಡೆಯರ್ ಫೋಟೋಗಳು ಅಲ್ಲಿರಲಿವೆ. ಮಹಾತ್ಮ ಗಾಂಧೀಜಿ ಅವರ 150 ಜನ್ಮ ದಿನದ ಹಿನ್ನೆಲೆ ಈ ಬಾರಿಯ ಗಣರಾಜ್ಯೋತ್ಸವ ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಟ್ಯಾಬ್ಲೋ ಮೂಲಕ ಮಹಾತ್ಮ ಗಾಂಧಿಗೆ ವಿಶೇಷ ಗೌರವ ಸರ್ಮಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಗಾಂಧಿ ನೆನಪಿಗೆ ಹಿನ್ನೆಲೆ ಧ್ವನಿಯಾಗಿ ಹುಯಿಲಗೋಳ ನಾರಾಯಣ ರಾವ್ ರಚನೆಯ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹಾಡು ಕೇಳಬಹುದಾಗಿದೆ. ಪರೇಡ್ ನಲ್ಲಿ 17 ರಾಜ್ಯಗಳು ಭಾಗವಹಿಸುತ್ತಿದ್ದು, ಭಾಗವಹಿಸುತ್ತಿರುವ ಎಲ್ಲಾ ರಾಜ್ಯಗಳಿಗೂ ಮಹಾತ್ಮ ಗಾಂಧಿ ವಸ್ತು ವಿಷಯ ಆಧರಿಸಿ ಪ್ರತಿ ರಾಜ್ಯದಲ್ಲಿ ಗಾಂಧಿ ಬಿಟ್ಟು ಹೋಗಿರುವ ನೆನಪುಗಳು ಆಯ್ದು ಸ್ತಬ್ಧ ಚಿತ್ರಗಳನ್ನು ರಚನೆ ಮಾಡಲಾಗುತ್ತಿದೆ. (ಎನ್.ಬಿ)

Leave a Reply

comments

Related Articles

error: