
ದೇಶ
ಹಾರ್ದಿಕ್, ರಾಹುಲ್ ಪ್ರಕರಣ: ಕೊನೆಗೂ ಮಾತನಾಡಿದ ಕರಣ್ ಜೋಹರ್
ನವದೆಹಲಿ,ಜ.24-ಕಾಫಿ ವಿತ್ ಕರಣ್ ಶೋದಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಸದ್ಯ ಕ್ರಿಕೆಟ್ ನಿಂದ ನಿಷೇಧಕ್ಕೊಳ್ಳಗಾಗಿದ್ದಾರೆ.
ಈ ಬಗ್ಗೆ ಇದೀಗ ನಿರ್ದೇಶಕ ಕರಣ್ ಜೋಹರ್ ಮಾತನಾಡಿದ್ದು, ನಾನು ತುಂಬಾ ಜವಾಬ್ದಾರನಾಗಿರುತ್ತೇನೆ ಎಂದು ಹೇಳಬಯಸುತ್ತೇನೆ. ಯಾಕೆಂದರೆ ಇದು ನನ್ನ ಶೋ, ಇದು ನನ್ನ ಫ್ಲ್ಯಾಟ್ಫಾರ್ಮ್. ಅವರನ್ನು ನಾನು ಆತಿಥಿಗಳಾಗಿ ಆಹ್ವಾನಿಸಿದ್ದೆ. ಹಾಗಾಗಿ ಕಾರ್ಯಕ್ರಮದ ಆಯೋಜನೆಯ ಸಂಪೂರ್ಣ ಜವಾಬ್ದಾರಿ ನನ್ನದಾಗಿದೆ ಎಂದಿದ್ದಾರೆ.
ಈ ಎಲ್ಲ ಘಟನೆಗಳ ಬಳಿಕ ಅನೇಕ ರಾತ್ರಿಗಳಲ್ಲಿ ನಿದ್ದೆಯೇ ಬರಲಿಲ್ಲ. ಈ ಕಳಂಕವನ್ನು ಹೇಗೆ ಮರೆಮಾಚಬಹುದು ಎಂಬುದರ ಬಗ್ಗೆ ಚಿಂತೆ ಕಾಡುತ್ತಿತ್ತು. ನನ್ನ ಮಾತನ್ನು ಯಾರು ಆಲಿಸುತ್ತಾರೆ? ಇವೆಲ್ಲವೂ ನನ್ನ ನಿಯಂತ್ರಣದಲ್ಲಿರಲಿಲ್ಲ ಎಂದು ವಿವರಿಸಿದರು.
ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಬಯಸುತ್ತಿಲ್ಲ. ಇದೇ ಪ್ರಶ್ನೆಯನ್ನು ನಾನು ದೀಪಿಕಾ ಪಡುಕೋಣೆ ಹಾಗೂ ಅಲಿಯಾ ಭಟ್ ಅವರಲ್ಲೂ ಪ್ರಶ್ನಿಸುತ್ತಿದ್ದೆ. ಹಾಗೆಯೇ ಪ್ರಶ್ನೆಯನ್ನು ಕೇಳಿದ್ದೇನೆ. ಆದರೆ ನನಗೆ ಬಂದ ಉತ್ತರಗಳನ್ನು ನನ್ನಿಂದ ನಿಯಂತ್ರಿಸಲು ಸಾಧ್ಯವಿಲ್ಲ ಎಂದರು.
ಹಾರ್ದಿಕ್ ಹಾಗೂ ರಾಹುಲ್ ನಿಷೇಧಕ್ಕೊಳಗಾಗಿ ವಿಚಾರಣೆಯನ್ನು ಎದುರಿಸುತ್ತಿರುವುದರ ಬಗ್ಗೆ ಕೇಳಿದಾಗ, ಹಾರ್ದಿಕ್–ರಾಹುಲ್ ಬಗ್ಗೆ ನನಗೆ ಖೇದವಿದೆ. ನಾನು ಟಿಆರ್ಪಿಗಾಗಿ ಇದನ್ನೆಲ್ಲ ಮಾಡಿಲ್ಲ ಎಂದು ಹೇಳಿದರು.
ಇದು ನನ್ನ ಕಾರ್ಯಕ್ರಮ ಆಗಿರುವುದರಿಂದ ಕೆಲವೊಂದು ಹೇಳಿಕೆಗಳು ಎಲ್ಲೇ ಮೀರಿರುವುದರಿಂದ ನಾನು ಕ್ಷಮೆಯಾಚಿಸುತ್ತೇನೆ. ನನಗನಿಸುತ್ತದೆ ತಮ್ಮ ತಪ್ಪಿಗಾಗಿ ಹಾರ್ದಿಕ್–ರಾಹುಲ್ ಈಗಾಗಲೇ ಬೆಲೆ ತೆತ್ತಿದ್ದಾರೆ ಎಂದರು. (ಎಂ.ಎನ್)