
ಮೈಸೂರು
ರಸ್ತೆಯ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ : ಎಸಿಪಿ ಮಲ್ಲಿಕ್
28ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಭಾನುವಾರ ಮೈಸೂರಿನ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ಒಂಟಿಕೊಪ್ಪಲಿನ ವೆಂಕಟರಮಣ ದೇವಾಲಯದ ಬಳಿ ಜಾಥಾಕ್ಕೆ ಕೆ.ಆರ್. ಎಸಿಪಿ ಮಲ್ಲಿಕ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ರಸ್ತೆಯಲ್ಲಿ ಸೈಕಲ್ ಓಡಿಸುವವರು ಹೇಗೆ ಬೇಕಾದರೂ ಓಡಿಸಬಹುದು ಎಂದುಕೊಂಡಿರುತ್ತಾರೆ. ಆದರೆ ಅದು ತಪ್ಪು. ಸೈಕಲ್ ಸವಾರರೂ ಚಲಿಸುವಾಗ ತಮ್ಮ ಎಡಭಾಗದಲ್ಲೇ ಸಾಗಬೇಕು. ರಸ್ತೆ ಮಧ್ಯೆ ಹೋದರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ರಸ್ತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದರು.
ಡಿಸಿಪಿ ರುದ್ರಮುನಿ ಮಾತನಾಡಿ ರಸ್ತೆ ಸುರಕ್ಷತೆಗಳನ್ನು ಪಾಲಿಸಬೇಕಾಗಿರುವುದು ವಾಹನ ಸವಾರರ ಕರ್ತವ್ಯವಾಗಿದೆ. ಸಿಗ್ನಲ್ ಗಳನ್ನು ಪಾಲಿಸಲೇಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ. ಹೆಲ್ಮೆಟ್ ನ್ನು ಕಡ್ಡಾಯವಾಗಿ ಧರಿಸಿ. ಇದರಿಂದ ವಾಹನ ಸವಾರರಿಗೂ ಕ್ಷೇಮ ಎಂದರು. ಜನರಲ್ಲಿ ರಸ್ತೆ ಸುರಕ್ಷತೆಯ ಕುರಿತು ಹಾಗೂ ಸೈಕಲ್ ಸವಾರರು ಯಾವರೀತಿ ರಸ್ತೆಯಲ್ಲಿ ಚಲಿಸಬೇಕು ಎನ್ನುವುದರ ಕುರಿತು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಜಾಥಾದಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಸೇರಿದಂತೆ ಎಲ್ಲ ಎಸಿಪಿ, ಡಿಸಿಪಿಗಳು ಪಾಲ್ಗೊಂಡಿದ್ದರು.