ದೇಶ

ಗಾಳಿಪಟ ಉತ್ಸವದ ವೇಳೆ ಅನಾಹುತ: ದೋಣಿ ಮಗುಚಿ 23 ಮಂದಿ ಸಾವು

ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಗಾಳಿಪಟ ಉತ್ಸವದ ವೇಳೆ ಸುಮಾರು 40 ಜನ ಪ್ರಯಾಣಿಸುತ್ತಿದ್ದ ದೋಣಿ ಮಗುಚಿ ಬಿದ್ದು 23 ಮಂದಿ ಸಾವನ್ನಪ್ಪಿದ್ದು, ಇನ್ನೂ ಅನೇಕ ಮಂದಿ ನಾಪತ್ತೆಯಾಗಿದ್ದಾರೆ.

ಗಂಗಾನದಿಯ ದಂಡೆಯ ಮೇಲೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಗಾಳಿಪಟ ಉತ್ಸವ ವೀಕ್ಷಿಸಿ ದೋಣಿಯಲ್ಲಿ ಬರುತ್ತಿದ್ದ ವೇಳೆ ನ್ಯಾಶನಲ್‌ ಇನ್ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎನ್‌ಐಟಿ) ಘಾಟ್‌ ಸಮೀಪ ದೋಣಿ ಮಗುಚಿ ದುರಂತ ಸಂಭವಿಸಿದೆ. ಉತ್ಸವದಲ್ಲಿ ಭಾಗವಹಿಸಲು ಹೆಚ್ಚಿನ ಜನ ಆಗಮಿಸಿದ್ದು, ಆದರೆ ಅವರಿಗೆ ಅಗತ್ಯವಾದಷ್ಟು ಸಂಖ್ಯೆಯಲ್ಲಿ ದೋಣಿಗಳು ಇರಲಿಲ್ಲ. ದೋಣಿಯಲ್ಲಿ ಮಿತಿಗಿಂತ ಹೆಚ್ಚಿನ ಜನರನ್ನು ತುಂಬಿದ್ದು ದುರಂತಕ್ಕೆ ಕಾರಣ ಎನ್ನಲಾಗಿದೆ.

ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದು ಅವರನ್ನು ಪಟ್ನಾ ವೈದ್ಯ ಕಾಲೇಜಿಗೆ ದಾಖಲು ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತಾಪ ಸೂಚಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ತನಿಖೆಗೆ ಆದೇಶಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ಧನ ನೀಡುವಂತೆ ನಿತೀಶ್ ಕುಮಾರ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

Leave a Reply

comments

Related Articles

error: