
ಮೈಸೂರು
ಸುತ್ತೂರು ಜೆಎಸ್ಎಸ್ನಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ
ಮೈಸೂರು,ಜ.26:- ಸುತ್ತೂರು ಜೆಎಸ್ಎಸ್ ಸಂಸ್ಥೆಗಳ ಆಶ್ರಯದಲ್ಲಿ 70 ನೆಯ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೈಸೂರಿನ ನಿವೃತ್ತ ಪೊಲೀಸ್ ಸಹಾಯಕ ಆಯುಕ್ತರಾದ ಎ.ನಾಗಪ್ಪರವರು ಸೇನೆ, ವಿಜ್ಞಾನ-ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಭಾರತ ದಾಪುಗಾಲು ಹಾಕಿದೆ. ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಮಳವಳ್ಳಿಯ ಒಬ್ಬ ವಿದ್ಯಾರ್ಥಿ ಜಪಾನ್ನಲ್ಲಿ ಹೆಸರುಗಳಿಸಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲು ಸದಾ ಹಾತೊರೆಯಬೇಕು. ದೇಶದ ಋಣವನ್ನು ತೀರಿಸಲು ಪ್ರತಿಯೊಬ್ಬರೂ ಸಿದ್ಧ-ಬದ್ಧರಾಗಿರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರಿನ ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ಕುಲಸಚಿವರಾದ ಪ್ರೊ. ಕೆ.ಎಸ್. ಲೋಕೇಶ್ ಮಾತನಾಡಿ, ಹಿರಿಯರ ತ್ಯಾಗ ಜೀವನದ ಫಲವಾಗಿ ನಾವಿಂದು ಉತ್ತಮ ಜೀವನ ನಡೆಸುತ್ತಿದ್ದೇವೆ. ಸ್ವಾಭಿಮಾನದ ಬದುಕು ನಮ್ಮದಾಗಬೇಕು. ಜನ್ಮಭೂಮಿಗಿಂತ ಶ್ರೇಷ್ಠವಾದುದು ಮತ್ತೊಂದಿಲ್ಲ. ನಮ್ಮ ನೆಲ, ನಮ್ಮ ಜಲ, ನಮ್ಮ ಜನ ಎಂಬ ವಿಶಾಲ ಭಾವನೆಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ದೇಶದ ಸೈನಿಕರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಅವರ ನಿರಂತರ ಕಣ್ಗಾವಲಿನಿಂದಾಗಿ ನಾವೆಲ್ಲಾ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ ಎಂದು ಸ್ಮರಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಸ್ಥರುಗಳಾದ ಜಿ.ಎಲ್.ತ್ರಿಪುರಾಂತಕ, ಸಂಪತ್ತು, ವೀರಭದ್ರಯ್ಯ, ಡಾ.ಎಂ.ಸಿ. ನಟರಾಜ, ಸಿ.ಎಸ್.ಶಿವಸ್ವಾಮಿ, ಜಿ.ಶಿವಮಲ್ಲು, ಸಿ.ಪಿ. ನಿರ್ಮಲ, ಬಿ.ಎಂ.ಸಿದ್ದಪ್ಪ, ಹಾಗೂ ಜಿ. ಎಂ. ಷಡಕ್ಷರಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಎನ್ಸಿಸಿ, ಸ್ಕೌಟ್ ಮತ್ತು ಗೈಡ್ಸ್, ಬ್ಯಾಂಡ್ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶಾಲಾ ಮಕ್ಕಳು ಪ್ರಾರ್ಥಿಸಿದರೆ, ಬಿ.ಪಿ. ಶೀಲಾ ಸ್ವಾಗತಿಸಿದರು. ಸೌಜನ್ಯ ಎಸ್.ಜೆ ವಂದಿಸಿದರೆ, ಜಿ.ಎಸ್.ಜಗದಾಂಬಿಕ ನಿರೂಪಿಸಿದರು. (ಎಸ್.ಎಚ್)