ಮೈಸೂರು

ತುರ್ತು ಪರಿಸ್ಥಿತಿ ಮರುಕಳಿಸಿದೆ : ಪ್ರೊ.ಚಂಪಾ ವಿಷಾದ

ಇತಿಹಾಸ ಪುನರಾವರ್ತನೆಗೊಂಡಿದ್ದು ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿಯ ಸರ್ವಾಧಿಕಾರಿ ಧೋರಣೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಮೇಲೆ ಹೇರಿದ್ದು ಮತ್ತೊಂದು ತುರ್ತು ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ವಿಷಾದ ವ್ಯಕ್ತಪಡಿಸಿದರು.

ಕಲಾಮಂದಿರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಬಹುಭಾಷಾ ನಾಟಕೋತ್ಸವ ‘ಬಹುರೂಪಿ’ಯ ರಾಷ್ಟ್ರೀಯ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತಿಹಾಸ ಸಂಪೂರ್ಣ ಸತ್ಯವಲ್ಲ. ದೇಶಕ್ಕೆ ಅಂಬೇಡ್ಕರ್, ನೆಹರೂ ಮಾದರಿ ಸಿದ್ಧಾಂತಗಳು ಅವಶ್ಯವಿದ್ದು ಪ್ರಸ್ತುತವಿರುವ ಶಂಕರಾಚಾರ್ಯರ ಹಿಂದುತ್ವವಾದಕ್ಕೂ ಅಂಬೇಡ್ಕರ್ ಬುದ್ದ ಸಿದ್ಧಾಂತಕ್ಕೂ ಪರಸ್ಪರ ವಿರುದ್ಧವಾಗಿದೆ. ಶಂಕರಾಚಾರ್ಯ ಅಧ್ವೈತ ಸಿದ್ಧಾಂತವನ್ನು ಸೋಲಿಸಲು ಬುದ್ಧ, ಅಂಬೇಡ್ಕರ್, ಪೆರಿಯಾರ್ ಸಿದ್ಧಾಂತವೇ ಸೂಕ್ತವಾಗಿದ್ದು ಮುಂದಿನ ಸಾಮಾಜಿಕ ಹೋರಾಟಗಳಿಗೆ ಆಶಯದಾಯಕವಾಗಿವೆ ಎಂದರು.

ಬಂಡವಾಳ ಹಾಗೂ ವಸಾಹತು ಶಾಹಿಗಳ ಸಿದ್ಧ ಸೂತ್ರದಂತೆಯೇ ರಾಜಕೀಯ ಪಕ್ಷಗಳ ಅಜೆಂಡಾಗಳು ತಯಾರಾಗುತ್ತಿವೆ. ದೇಶದಲ್ಲಿರುವ ಕಪ್ಪು ಹಣ ತಡೆಯಲು ಬಳಸಿದ ನೋಟು ಅಮಾನ್ಯ ಅಸ್ತ್ರವೂ ಜನಸಾಮಾನ್ಯರ ಬದುಕು ಡೋಲಾಯಮಾನವಾಗಿಸಿದೆ ಎಂದರು.

ಇಂದು ಸಾಮಾಜಿಕ ಜಾಲತಾಣಗಳ ಸಮಗ್ರ ಹಾಗೂ ಸುವ್ಯವಸ್ಥಿತ ಬಳಕೆಯಿಂದ ಮಹತ್ತರ ಲಾಭ ಹಾಗೂ ಬದಲಾವಣೆಯನ್ನು ತರಬಹುದು ಎನ್ನುವುದಕ್ಕೆಆಮ್ ಆದ್ಮಿ ಪಕ್ಷವೇ ಸಾಕ್ಷಿಯೆಂದು ತಿಳಿಸಿದರು. ಸಮಕಾಲೀನ ಪರಿಸ್ಥಿತಿಯ ಸೂಕ್ಷ್ಮತೆ, ಪ್ರಬುದ್ಧವಾದ ವಸ್ತು ಚಿತ್ರಗಳನ್ನು ಕಟ್ಟಿಕೊಡುವಲ್ಲಿ ಮುಂಚೂಣಿಯಲ್ಲಿದ್ದು, ವಯಸ್ಸಿನ ಹಿನ್ನೆಲೆಯೋ ಅಥವಾ ಅವಶ್ಯವಿಲ್ಲವೋ ಸಾಮಾಜಿಕ ಜಾಲತಾಣಗಳು ನನ್ನಿಂದ ಬಹು ದೂರವೆಂದರು ಹಾಸ್ಯಭರಿತ ವ್ಯಂಗ್ಯವಾಡಿದರು.

ರಂಗಭೂಮಿ ಬದುಕಿನ ಅವಿಭಾಜ್ಯ ಅಂಗ. ಬದುಕಿನ ಎಲ್ಲ ಚಟುವಟಿಕೆಗಳು ರಂಗಭೂಮಿಯಲ್ಲಿ ಅಭಿವ್ಯಕ್ತಿತ್ವಗೊಳ್ಳುತ್ತಿದ್ದು ಪರಸ್ಪರರಲ್ಲಿ ಅವಲಂಬನೆ, ಸಹಕಾರ ಧ್ಯೇಯೋದ್ದೇಶಗಳ ತಳಹದಿಯಲ್ಲಿಯೇ ಕಟ್ಟಲ್ಪಟ್ಟಿದ್ದು ಸಾಮಾಜಿಕ ಜಾಲತಾಣಗಳು ವೈಯುಕ್ತಿಕ ಚಟುವಟಿಕೆಯ ತಾಣವಾಗಿದೆ.  ಸಾಮಾಜಿಕ ಪ್ರಭುತ್ವ ಬೇಡಿಕೆಗಳಿಗೆ ಉತ್ತರದಾಯಿತ್ವವಾಗಿಲ್ಲ ಎಂದು ಸಂಸ್ಕೃತಿ ಚಿಂತಕ ಡಾ.ಮೇಟಿ ಮಲ್ಲಿಕಾರ್ಜುನ ‘ಸಾಮಾಜಿಕ ಜಾಲತಾಣ ಮತ್ತು ರಂಗಭೂಮಿ’ ವಿಷಯವಾಗಿ ಅಭಿಪ್ರಾಯ ತಿಳಿಸಿದರು.

ರಂಗಭೂಮಿ ಕೇವಲ ಮನರಂಜನೆಗೆ ಸೀಮಿತವಾಗದೆ ಸಾಮಾಜಿಕ ಬಿಕ್ಕಟ್ಟುಗಳ ಹೋರಾಟಗಳಿಗೆ ಹೊಣೆಗಾರಿಕೆಯನ್ನು ನಿರ್ಮಿಸುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಸೂಕ್ಷ್ಮತೆ ಹಾಗೂ ಅಂತರ್‍-ವ್ಯಕ್ತಿತ್ವಕ್ಕೆ ನೆಲೆಯಿಲ್ಲ.

ಜಾಲತಾಣಗಳು ವಿವೇಕದ ಭಾಗವಾಗಿ ರೂಪುಗೊಂಡು ಸಾಮಾಜಿಕ ಅನಿಷ್ಟಗಳ ವಿರುದ್ಧದ ಧ್ವನಿಯಾಗಬೇಕು. ಇಲ್ಲದಿದ್ದರೆ ಅದೊಂದು ಕೇವಲ ಡಿಜಿಟಲ್ ಡಿವೈಸರ್ ಎಂದು ಮಾರ್ಮಿಕವಾಗಿ ನುಡಿದರು.

ಪ್ರೊ.ಮುಜ಼ಫರ್ ಅಸಾದಿ ಅವರು ‘ಹುಸಿ ರಾಷ್ಟ್ರೀಯತೆಯ ಉನ್ಮಾದ-ಅಕಲ್ಪಿತ ಚರಿತ್ರೆಯ ನಿರೂಪಣೆ’ ವಿಷಯವಾಗಿ ಮಾತನಾಡಿ, ಗಾಂಧೀಜಿ ಬಹುರೂಪಿಯಾಗಿದ್ದು ಕೇವಲ ಸ್ವಚ್ಛತಾ ಸಂಕೇತವಾಗಿ ಬಳಸುತ್ತಿರುವುದು ಖಂಡನೀಯ. ಹುಸ ರಾಷ್ಟ್ರೀಯತೆ ನೆಪದಲ್ಲಿ ಇತಿಹಾಸವನ್ನೇ ಪುನರ್‍’ಸೃಷ್ಟಿಸುವ ಪಿತೂರಿಯು ವಿದ್ಯೆ-ಭಾರತಿ ಹಾಗೂ ಬಾಲ-ಭಾರತಿ ಶಾಲೆಗಳಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಸ್ವಾತಂತ್ರ್ಯವೂ 2013ರಲ್ಲಿ ಬಂತು ಎಂದು ಪಠ್ಯ ಬದಲಾದರು ಅಚ್ಚರಿಯಿಲ್ಲ ಎಂದು ವ್ಯಂಗ್ಯವಾಡಿದರು. ಹೊಸ ಸಂಸ್ಕೃತಿ ಹುಟ್ಟು ಹಾಕಲು ಉನ್ನತ ಸ್ಥಾನಗಳಲ್ಲಿ ಎಡಪಂಥೀಯರನ್ನು ತೆರವುಗೊಳಿಸಿ ಬಲಪಂಥೀಯರನ್ನು ಬಲಪಡಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ನೋಟು ಅಮಾನ್ಯವೂ ಹುಸಿ ರಾಷ್ಟ್ರೀಯತೆಯ ಒಂದು ಭಾಗವೇ ಎಂದರು.

ರಂಗನಿರ್ದೇಶಕಿ ಪ್ರತಿಭಾ ಸಾಗರ ಪ್ರತಿಕ್ರಿಯಿಸಿದರು.

Leave a Reply

comments

Related Articles

error: