ಮೈಸೂರು

‘ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡ ದೇಶ ಭಾರತ’ : ಡಾ.ಹೆಚ್.ಎ.ರಂಗನಾಥ್

ಮೈಸೂರು, ಜ.26- ನಗರದ ಶಾರದಾ ವಿಲಾಸ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ 70ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳು ಹಾಗೂ ನ್ಯಾಕ್ ಸಮಿತಿಯ ಮಾಜಿ ನಿರ್ದೇಶಕರಾದ ಪ್ರೊ.ಹೆಚ್.ಎ.ರಂಗನಾಥ್ ಅವರು ಮಾತನಾಡಿ, ಭಾರತ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡ ಏಕೈಕ ಹೆಮ್ಮೆಯ ದೇಶವಾಗಿದ್ದು, ಸರ್ವರಿಗೂ ಸಮಾನತೆ, ಸಹಭಾಳ್ವೆಗೆ ಅವಕಾಶವನ್ನು ದೊರಕಿಸಿಕೊಟ್ಟಿದೆ. ಜಾತಿ, ಭೇದ, ವರ್ಗ, ಮತಗಳ ಘರ್ಷಣೆಯಿಲ್ಲದೆ ಒಗ್ಗಟ್ಟಿನಿಂದ ಗಣತಂತ್ರ ಹಬ್ಬವನ್ನು ಆಚರಿಸುವ ರಾಷ್ಟ್ರೀಯ ಹಬ್ಬವೇ ಗಣರಾಜ್ಯೋತ್ಸವ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮ ಗಾಂಧಿ, ಪ್ರಥಮ ಮಾಜಿ ರಾಷ್ಟ್ರಪತಿ ರಾಜೇಂದ್ರಪ್ರಸಾದ್ ಅವರುಗಳ ತ್ಯಾಗ, ಬಲಿದಾನಗಳ ಫಲವೇ ಇಂದು ಸ್ವತಂತ್ರರಾಗಿ ಜೀವಿಸಲು ಸಾಧ್ಯವಾಗಿದೆ. ಸ್ವಾತಂತ್ರ್ಯ, ಸಮಾನತೆ, ಸೋದರತ್ವದ ಮತ್ತೊಂದು ಹೆಸರೇ ನ್ಯಾಯ. ಈ ಹಿನ್ನೆಲೆಯಲ್ಲಿ ಇಂದಿನ ಯುವಕರು ದೇಶವನ್ನು ಮುನ್ನಡೆಸಲು ಒಗ್ಗಟ್ಟಿನಿಂದ ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸಬೇಕಾಗಿದೆ ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಧ್ವಜಾರೋಹಣ ಸ್ವೀಕರಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಬಿ.ಎಸ್.ಪಾರ್ಥಸಾರಥಿಯವರು ಆರೋಗ್ಯಕರವಾದ ಸಮಾಜವನ್ನು ಸೃಷ್ಟಿಸುವ ಜವಾಬ್ದಾರಿ ಯುವಕರ ಮೇಲಿದ್ದು, ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಶಾಲಾ ಕಾಲೇಜಿನ ಹಂತದಲ್ಲಿಯೇ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಹೆಚ್.ಕೆ.ಶ್ರೀನಾಥ್, ಆಡಳಿತ ಮಂಡಳಿ ಸದಸ್ಯರಾದ ವೈ.ಕೆ.ಭಾಸ್ಕರ್, ಎಸ್.ನಾಗರಾಜ್, ಹರೀಶ್, ಕೃಷ್ಣ, ಡೋಂಗ್ರೆ ಉಪಸ್ಥಿತರಿದ್ದರು. ಇದೇ  ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಮುಖ್ಯ ಅತಿಥಿಗಳಾದ ಡಾ.ಹೆಚ್.ಎ.ರಂಗನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವೇದಿಕೆಗೆ ಕಾರ್ಯದರ್ಶಿ ಹೆಚ್.ಕೆ.ಶ್ರೀನಾಥ್ ಸ್ವಾಗತಿಸಿದರೆ, ಡಾ.ಸತ್ಯನಾರಾಯಣ ವಂದಿಸಿದರು. ಡಾ.ಹನುಮಂತಾಚಾರ್ ಜೋಷಿ ಅತಿಥಿಗಳನ್ನು ಪರಿಚಯಿಸಿದರು. ನಿರೂಪಣೆಯನ್ನು ಡಾ.ವಿಶ್ವನಾಥ್, ವೆಂಕಟರಮಣ ಭಟ್ ಹಾಗೂ ಡಾ.ವಿಮಲಶ್ರೀ ನೆರವೇರಿಸಿದರು. ನಂತರ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: