ಮೈಸೂರು

ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಜನ್ಮ ದಿನಾಚರಣೆ

ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ 61 ನೇ ಜನ್ಮದಿನ ಮತ್ತು 68 ನೇ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಭಾನುವಾರ ಮೈಸೂರಿನ ಪುರಭವನದ ಮುಂಭಾಗ ಹಮ್ಮಿಕೊಳ್ಳಲಾಗಿತ್ತು.

ಪುರಭವನದ ಮುಂಭಾಗ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ,  ಪಟಾಕಿ ಸಿಡಿಸಿ, ಕೇಕ್ ಕತ್ತರಿಸುವ ಮೂಲಕ ಮಾಯಾವತಿ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ಬಹುಜನ ಪಕ್ಷದ ಜಿಲ್ಲಾಧ್ಯಕ್ಷ ಭೀಮನಹಳ್ಳಿ ಸೋಮೇಶ್, ಇಂದು ರಾಷ್ಟ್ರದಾದ್ಯಂತ ಮಾಯಾವತಿ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಮಾಯಾವತಿ ಅವರು ದೇಶದ ಪೂರ್ವಿಕರಾದ ಶೋಷಿತ ಸಮಾಜವನ್ನು ಶೋಷಣೆಯಿಂದ ಮುಕ್ತಗೊಳಿಸಲು, ಅವರನ್ನು ಒಗ್ಗೂಡಿಸಿ ಸಮಾನತೆಯನ್ನು ಸಾಧಿಸಲು ಹಲವಾರು ಹೋರಾಟಗಾರರ ಮಾರ್ಗವನ್ನು ಉಳಿಸಿಕೊಂಡು ಹೊರಟಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಸಹೋದರತ್ವ, ಸಹಬಾಳ್ವೆ ಸಾಧಿಸಲು, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಧ‍್ಯೇಯವನ್ನು ಉಳಿಸಲು ಅವರು ಹೋರಾಟ ಮಾಡುತ್ತಿದ್ದಾರೆ. ದಲಿತರ ಮೇಲಿನ ಅಸ್ಪೃಶ್ಯತೆ, ಅಸಮಾನತೆ, ದಬ್ಬಾಳಿಕೆ, ದೌರ್ಜನ್ಯವನ್ನು ನಾಶ ಮಾಡಿ ಸಮಾನತೆಯ ಸಮಾಜವನ್ನು ಕಟ್ಟುತ್ತಿರುವ ಮಾಯಾವತಿ ಅವರಿಗೆ ಪಕ್ಷದ ಎಲ್ಲಾ ಕಾರ್ಯಕರ್ತರ ಬೆಂಬಲವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಶಿವಮಾಯ, ಪ್ರತಾಪ್, ಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ನಂತರ ಕೆ.ಆರ್. ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.

Leave a Reply

comments

Related Articles

error: