
ಪ್ರಮುಖ ಸುದ್ದಿ
9ವರ್ಷಗಳಿಂದ ಪ್ರೀತಿಸಿ, ವಿವಾಹವಾಗಿದ್ದ ಜೋಡಿಯೀಗ ಪೋಷಕರ ಭಯದಲ್ಲಿ : ರಕ್ಷಣೆಗಾಗಿ ಪೊಲೀಸರ ಮೊರೆ
ರಾಜ್ಯ(ಮಂಡ್ಯ)ಜ.28:- 9ವರ್ಷಗಳಿಂದ ಪರಸ್ಪರ ಪ್ರೀತಿಸಿ ವಿವಾಹವಾಗಿರುವ ಜೋಡಿ ಪೋಷಕರ ಭಯದಲ್ಲಿ ದಿನ ಕಳೆಯುತ್ತಿದ್ದು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಹಾಲಹಳ್ಳಿಯ ನಾಗರಾಜು ಎಂಬವರ ಪುತ್ರಿ ಚಂದುಶ್ರೀ, ಕೃಷ್ಣೇಗೌಡರ ಪುತ್ರ ನಿರಂಜನ್ಗೌಡ ಪ್ರೀತಿಸಿ, ಕುಟುಂಬ ಸದಸ್ಯರ ಒಪ್ಪಿಗೆ ಪಡೆದು ವಿವಾಹವಾಗಲು ಮುಂದಾಗಿದ್ದರು. ಪಾಲಕರು ವಿರೋಧಿಸಿದ ಹಿನ್ನೆಲೆಯಲ್ಲಿ ಜ.24ರಂದು ಇಬ್ಬರು ಮೈಸೂರಿಗೆ ತೆರಳಿ ವಿವಾಹವಾಗಿದ್ದು, 25ರಂದು ರಕ್ಷಣೆಗಾಗಿ ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇತ್ತ ಚಂದುಶ್ರೀ ತಂದೆ ನಾಗರಾಜು ತಮ್ಮ ಪುತ್ರಿ ನಾಪತ್ತೆಯಾಗಿರುವ ಬಗ್ಗೆ ನಗರದ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ನಿರಂಜನ್ಗೌಡರ ತಂದೆ, ತಾಯಿಯನ್ನು ಠಾಣೆಗೆ ಕರೆಸಿ ಪುತ್ರ ಎಲ್ಲಿದ್ದಾನೆ ಎಂದು ಹಿಂಸೆ ಕೊಡುತ್ತಿದ್ದಾರೆ ಎಂದು ನಿರಂಜನ್ಗೌಡ ಸಂಬಂಧಿಕರು ಆಪಾದಿಸುತ್ತಿದ್ದಾರೆ.
ನಿರಂಜನ್ಗೌಡ ಹಾಗೂ ಚಂದುಶ್ರೀ ಶನಿವಾರ ಮನೆಗೆ ಬರುತ್ತಿದ್ದರು. ಈ ವೇಳೆ ನಾಗರಾಜು ಮನೆಯವರು ಹಲ್ಲೆ ಮಾಡುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಿಂದಲೇ ವಾಪಸ್ಸಾಗಿದ್ದಾರೆ ಎನ್ನಲಾಗುತ್ತಿದೆ. (ಕೆ.ಎಸ್,ಎಸ್.ಎಚ್)