ಮೈಸೂರು

ಸಂಸತ್ ಅಧಿವೇಶನದಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಬೇಕಾದಷ್ಟು ಅವಕಾಶವಿದ್ದರೂ ಉತ್ತಮ ಚರ್ಚೆ ನಡೆಯುತ್ತಿಲ್ಲ : ಮಾಜಿ ಸಂಸದ ಕೃಷ್ಣ ಬೇಸರ

ಮೈಸೂರು,ಜ.28:- ಸಂಸತ್ ಅಧಿವೇಶನದಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಬೇಕಾದಷ್ಟು ಅವಕಾಶವಿದ್ದರೂ ಉತ್ತಮ ಚರ್ಚೆಗಳು ನಡೆಯದೇ, ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಕೃಷ್ಣ ಬೇಸರ ವ್ಯಕ್ತಪಡಿಸಿದರು.

ಅವರಿಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಮೈಸೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ನೆಹರು ಯುವ ಕೇಂದ್ರ, ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ಸಹಯೋಗದಲ್ಲಿ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ವಿದ್ಯಾಲಯದ ಆವರಣದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಮಟ್ಟದ ರಾಷ್ಟ್ರೀಯ ಯುವ ಸಂಸತ್ ಉತ್ಸವ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸಂಸತ್ ಎಂದರೇನು, ಅದರಲ್ಲಿ ಎಷ್ಟು ಮಂದಿ ಸದಸ್ಯರಿರುತ್ತಾರೆ, ಆಯ್ಕೆಯಾದ ಸದಸ್ಯರಿಗೆ ಯಾರು ಪ್ರಮಾಣವಚನ ಬೋಧಿಸುತ್ತಾರೆ, ಸ್ಪೀಕರ್, ಡೆಪ್ಯೂಟಿ ಸ್ಪೀಕರ್ ಆಯ್ಕೆ ಹೇಗೆ ನಡೆಯುತ್ತದೆ ಎಂಬುದನ್ನು ವಿವರಿಸಿದರು. ಸಂಸತ್ ನಲ್ಲಿ ನಡೆಯುವ ಅಧಿವೇಶನದಲ್ಲಿ ಜನರ ಸಮಸ್ಯೆಗಳನ್ನು ಚರ್ಚಿಸಲು ಬೇಕಾದಷ್ಟು ಅವಕಾಶಗಳಿವೆ. ಆದರೆ ಇತ್ತೀಚೆಗೆ ಚರ್ಚೆಗಳು ನಡೆಯುತ್ತಿದೆಯಾ?ಪ್ರಶ್ನೆಗಳನ್ನು ಮಾಡುತ್ತಿದ್ದಾರಾ? ಯಾರಿಗೂ ಈ ಚರ್ಚೆ, ಸಮಸ್ಯೆಗಳ ಪರಿಹಾರ ಬೇಕಾಗಿಲ್ಲ. ಅವರ ಪಾಡಿಗೆ ಅವರು ಬರುತ್ತಾರೆ ಸಹಿ ಹಾಕಿ ಹೋಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮೊದಲೆಲ್ಲ ಸಂಸತ್ ಸದಸ್ಯರು ಆಡಳಿತ-ವಿರೋಧಪಕ್ಷದಲ್ಲಿರುವವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದರು. ಅವರು ಮೊದಲೇ ಭಾರೀ ಸಿದ್ಧತೆ ಮಾಡಿಕೊಂಡು ಹೋಗುತ್ತಿದ್ದರು. ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು. ಆದರೆ ಬರ್ತಾ ಬರ್ತಾ ಸಹಿ ಹಾಕಿ ಸುಮ್ಮನೆ ತಿರುಗಾಡುವವರೇ ಜಾಸ್ತಿ ಆಗಿದ್ದಾರೆ ಎಂದರು. ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮೊದಲೆಲ್ಲ ಚರ್ಚೆಯಲ್ಲಿ ಗಂಭೀರತೆಯಿರುತ್ತಿತ್ತು. ಯಾವುದಾದರೂ ಬಿಲ್ ಪಾಸ್ ಮಾಡುವಾಗ ಅದರ ಕುರಿತು ತುಂಬಾ ಚರ್ಚೆಯಾಗುತ್ತಿತ್ತು. ಯಾವ ಉದ್ದೇಶಕ್ಕಾಗಿ ತರುತ್ತಿದ್ದಾರೆ? ಜನರಿಗೆ ಅದರಿಂದ ಒಳ್ಳೆಯದಾಗಲಿದೆಯಾ ಅಥವಾ ತೊಂದರೆಯಾಗತ್ತಾ, ಯಾವ ರೀತಿಯಲ್ಲಿ ತಂದರೆ ಜನರಿಗೆ ತೊಂದರೆಯಾಗತ್ತೆ, ಯಾವ ಉದ್ದೇಶಕ್ಕಾಗಿ ತರುತ್ತಿದ್ದಾರೆ ಎಂಬುದನ್ನು ಚರ್ಚಿಸುತ್ತಿದ್ದರು. ಆದರೆ ಬರುತ್ತ ಕ್ವಾಲಿಟಿಯೇ ಕಡಿಮೆಯಾಗುತ್ತಿದೆ. ಇಂದಿನ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆಯ ಮೇಲೆಯೇ ಕೆಟ್ಟ ಭಾವನೆ ಬರುತ್ತಿದೆ. ಆರ್ಥಿಕ ಅಸಮಾನತೆ, ಸಾಮಾಜಿಕ ಅನ್ಯಾಯ ಸರಿಪಡಿಸದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗಲಿದೆ ಎಂದು ಎಚ್ಚರಿಸಿದರು. ಅನೇಕರ ತ್ಯಾಗ,ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು. ಹಣದ ಪ್ರಭಾವ ಹೆಚ್ಚಾಗಿದ್ದು, ಕಳ್ಳಲೆಕ್ಕ ಕೊಡೋದು, ಸುಳ್ಳು ಹೇಳೋದು ಜಾಸ್ತಿಯಾಗುತ್ತಿದೆ. ಪ್ರಜೆಗಳು ಜಾಗೃತರಾಗಬೇಕು. ಬೇರೆ ದೇಶಗಳು ಯಾವ ರೀತಿ ಅಭಿವೃದ್ಧಿಯಾಗುತ್ತಿವೆ. ಆ ದಿಕ್ಕಿನಲ್ಲಿ ಸಾಗಲು ನಾವು ಏನು ಮಾಡಬೇಕು ಎಂಬ ಚಿಂತನೆಗಳನ್ನು ನಡೆಸಿ ಜನಪ್ರತಿನಿಧಿಗಳು ಅವರ ಕೆಲಸ ಕಾರ್ಯಗಳನ್ನು ಮಾಡಿದರೆ ಪ್ರಜಾಪ್ರಭುತ್ವ ಇಷ್ಟೊಂದು ಹಾಳಾಗುತ್ತಿರಲಿಲ್ಲ. ಅದಕ್ಕಾಗಿ ನೀವು ಇಂದಿನಿಂದಲೇ ನಾವು ಯಾವುದೇ ಕೆಲಸಕ್ಕೆ ಲಂಚ ತೆಗೆದುಕೊಳ್ಳಬಾರದು, ಕೆಲಸ ಮಾಡಿಕೊಡಲು ಯಾವ ಜಾತಿ ಎಂಬುದನ್ನು ನೋಡಲ್ಲ ಎಂಬುದಾಗಿ ಪ್ರತಿಜ್ಞೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ.ಸಾಯಿನಾಥ ಮಲ್ಲಿಗೆಮಾಡು, ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಬಿ.ಚಂದ್ರಶೇಖರ್, ಪ್ರಾದೇಶೀಕ ನಿರ್ದೇಶಕ ಖಾದ್ರಿ ನರಸಿಂಹಯ್ಯ, ಮಾಜಿ ಮೇಯರ್ ಪುರುಷೋತ್ತಮ್, ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಧ್ಯಾಪಕ ಪ್ರೊ.ರಾಜೇಶ್, ವಿ.ಕ.ಸಂಪಾದಕ ಲೋಕೇಶ್ ಕಾಯರ್ಗ, ವಿಜಯಕುಮಾರ್ ನಾಗನಾಳ, ವಕೀಲರಾದ ಸ್ಮಿತಾ ದೇವಯ್ಯ ಬಿ.ಆರ್.ಮಾರುತಿ ಪ್ರಸನ್ನ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: