ಮೈಸೂರು

ಪೋದಾರ್ ಶಾಲೆಯಲ್ಲಿ ‘ಬೇಟಿ ಬಚಾವೋ’ ಮ್ಯಾರಥಾನ್ ಓಟ

ಮೈಸೂರು,ಜ.28:- ಮೈಸೂರಿನ ಪೋದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವದ ಆಚರಣೆ ಬಹಳ ವಿಜೃಂಭಣೆಯಿಂದ ನಡೆಯಿತು. ಪೋದಾರ್ ಶಾಲೆಯ ವತಿಯಿಂದ `ಬೇಟಿ ಬಚಾವೋ’ ಎಂಬ ಶೀರ್ಷಿಕೆಯಡಿಯಲ್ಲಿ ಶಾಲಾ ಮಕ್ಕಳು, ಪಾಲಕರು, ಪೋಷಕರಿಗೋಸ್ಕರ `ಮ್ಯಾರಥಾನ್’ ಓಟವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ಮೈಸೂರಿನ ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ 93.5 ರೆಡ್ ಎಫ್.ಎಮ್ ನ ನಿರೂಪಕರಾದ ದೀಪಕ್ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಶಾಲೆಯು ಕಳೆದ ಮೂರು ವರ್ಷಗಳಿಂದಲೂ ಈ ದಿನದಂದು ಮ್ಯಾರಥಾನ್ ಓಟವನ್ನು ನಡೆಸಿಕೊಂಡು ಬಂದಿದೆ. ಈ ವರ್ಷ ಹೆಣ್ಣು ಮಕ್ಕಳ ಮೇಲೆ ಉಂಟಾಗುತ್ತಿರುವ ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದ ಈ ಓಟವನ್ನು ಆಯೋಜಿಸಲಾಗಿತ್ತು.  ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂಬ ಘೋಷವಾಕ್ಯಗಳ ಫಲಕಗಳು ಎಲ್ಲೆಡೆ ರಾರಾಜಿಸಿದವು.  ಗಣರಾಜ್ಯೋತ್ಸವದ ಶುಭ ದಿನದಂದು ಶಾಲೆಯು ಹೆಣ್ಣು ಮಕ್ಕಳ ರಕ್ಷಣೆಗಾಗಿ ಜನಜಾಗೃತಿ ಉಂಟುಮಾಡುತ್ತಿರುವುದನ್ನು ಎಲ್ಲರೂ ಶ್ಲಾಘಿಸಿದರು. ನಂತರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳು ನಡೆಸಿಕೊಟ್ಟ ಏರೋಬಿಕ್ಸ ನೃತ್ಯ ಮತ್ತು ವಂದೇ ಮಾತರಂ ನೃತ್ಯ ನೆರೆದವರ ಹೃನ್ಮನವನ್ನು ತಣಿಸಿತು. ಶಾಲಾ ಪ್ರಾಂಶುಪಾಲರಾದ ಕೃಷ್ಣ ಬಂಗೇರ ಅವರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: