ಕ್ರೀಡೆದೇಶ

ಭಾರತಕ್ಕೆ ಮೂರು ವಿಕೆಟ್ ಗಳ ಭರ್ಜರಿ ಜಯ

ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಹಾಗೂ ಕೇದಾರ್ ಜಾಧವ್ ಅವರ ಭರ್ಜರಿ ಶತಕದ ನೆರವಿನಿಂದ 3 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 351 ರನ್ ಗಳ ಗುರಿಯನ್ನು ಬೆನ್ನುಹತ್ತಿದ ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಹಾಗೂ ಕೇದಾರ್ ಜಾಧವ್ ಅವರ ಉತ್ತಮ  ಬ್ಯಾಟಿಂಗ್ ಪ್ರದರ್ಶನದಿಂದ ಜಯಿಸಿದೆ.

ಇಂಗ್ಲೆಂಡ್ ನೀಡಿದ್ದ 351 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಭಾರತ ತಂಡಕ್ಕೆ ಇಂಗ್ಲೆಂಡ್ ಆರಂಭಿಕ ಆಘಾತ ನೀಡಿತ್ತು. ನಾಲ್ಕನೇ ಓವರ್ ನಲ್ಲಿಯೇ ಕೆಎಲ್ ರಾಹುಲ್ ವಿಲ್ಲೆ  ಬೌಲಿಂಗ್ ನಲ್ಲಿ ಕೇವಲ 8 ರನ್ ಗಳಿಗೆ ಕ್ಲೀನ್ ಬೋಲ್ಡ್ ಆಗಿದ್ದರು. ಬಳಿಕ ಶಿಖರ್ ಧವನ್ ಕೂಡ ಕೇವಲ 1 ರನ್ ಗಳಿಸಿ ನಿರ್ಗಮಿಸಿದ್ದರು.
ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ ಕ್ರೀಸ್ ಗೆ ಅಂಟಿಕೊಳ್ಳುತ್ತಿದ್ದಂತೆಯೇ ಇತ್ತ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಯುವರಾಜ್ ಸಿಂಗ್ ಕೇವಲ 15 ರನ್ ಗಳಿಸಿ ಸ್ಟೋಕ್ಸ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ಬಳಿಕ ಬಂದ  ಮಾಜಿ ನಾಯಕ ಎಂಎಸ್ ಧೋನಿ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೇ ಬಾಲ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆ ಗೂಡಿದ ಕೇದಾರ್ ಜಾಧವ್ ಸಮಯೋಚಿತ ಆಟ ಪ್ರದರ್ಶಿಸಿದರು.

ವಿರಾಟ್ ಕೊಹ್ಲಿ  ಹಾಗೂ ಜಾಧವ್ ದಾಖಲೆಯ ಜೊತೆಯಾಟವಾಡುವ ಮೂಲಕ ಭಾರತ ತಂಡಕ್ಕೆ ಉತ್ತಮ ಆಸರೆಯಾದರು. ಈ ಹಂತದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದರು.
ಇದರ ಬೆನ್ನಲ್ಲೇ ಕೇದಾರ್ ಜಾಧವ್ ಕೂಡ ಬೌಂಡರಿ ಸಿಕ್ಸರ್ ಗಳ ನೆರವಿನಿಂದ ಶತಕ ಸಿಡಿಸಿದರು. ನಂತರ 122 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ನಾಯಕ ಕೊಹ್ಲಿ 37ನೇ ಓವರ್ ನಲ್ಲಿ ಸ್ಟೋಕ್ಸ್ ಬೌಲಿಂಗ್ ನಲ್ಲಿ  ಭಾರಿ ಹೊಡೆತಕ್ಕೆ ಕೈಹಾಕಿ ವಿಲ್ಲೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ 120 ರನ್ ಗಳಿಸಿದ್ದ ಜಾಧವ್ ಕೂಡ ಬಾಲ್ ಬೌಲಿಂಗ್ ನಲ್ಲಿ ಸ್ಟೋಕ್ಸ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಜೊತೆಗೂಡಿದ ಹಾರ್ದಿಕ್ ಪಾಂಡ್ಯಾ ಹಾಗೂ ರವೀಂದ್ರ ಜಡೇಜಾ ಭಾರತ ತಂಡವನ್ನು ಗೆಲುವಿನ ದಡ ಸೇರಿಸುವ ಭರವಸೆ ಮೂಡಿಸಿದ್ದರಾದರೂ, 45ನೇ ಓವರ್ ನಲ್ಲಿ ರಷೀದ್ ಬೌಲಿಂಗ್ ನಲ್ಲಿ 13 ರನ್ ಗಳಿಸಿದ್ದ ಜಡೇಜಾ ಔಟ್ ಆದರು. ಬಳಿಕ ಪಾಂಡ್ಯಾ ಜೊತೆಗೂಡಿದ ಅಶ್ವಿನ್ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.
ಅಂತಿಮವಾಗಿ ಭಾರತ ತಂಡ 48.1 ಓವರ್ ಗಳಲ್ಲಿ 356 ರನ್ ಗಳಿಸುವ ಮೂಲಕ ಇಂಗ್ಲೆಂಡ್ ವಿರುದ್ಧ  ಮೂರು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

Leave a Reply

comments

Related Articles

error: