ಮೈಸೂರು

ಎಂಎಲ್ಎ, ಎಂಪಿಗಿಂತ ನಗರಪಾಲಿಕೆ, ಗ್ರಾಪಂ ಸದಸ್ಯರಾಗುವುದು ಕಷ್ಟ: ಮರಿತಿಬ್ಬೇಗೌಡ

ಮೈಸೂರು,ಜ.28-ಮೌಲಿಂ ನಗರ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮೌಲಿಂ ನಗರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಾದೇಗೌಡ, ನಗರಪಾಲಿಕೆ ಸದಸ್ಯರಾದ ರುಕ್ಮಿಣಿ ಮಾದೇಗೌಡ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮರಿತಿಬ್ಬೇಗೌಡ ಅವರು, ಎಂಎಲ್ಎ, ಎಂಪಿಗಳಾಗಬಹುದು ಆದರೆ ಮಹಾನಗರಪಾಲಿಕೆ, ಗ್ರಾಪಂ ಸದಸ್ಯರಾಗುವುದು ಬಹಳ ಕಷ್ಟ. ಸದಸ್ಯರಾದ ಮೇಲೆ ಅದನ್ನು ಐದು ವರ್ಷ ನಿಭಾಯಿಸುವುದು ಇನ್ನು ಕಷ್ಟದ ಕೆಲಸ. ಜಿಪಂ ಸದಸ್ಯರಾಗಿರುವ ಮಾದೇಗೌಡರು, ನಗರಪಾಲಿಕೆ ಸದಸ್ಯರಾಗಿರುವ ರುಕ್ಮಿಣಿ ಮಾದೇಗೌಡರು ಮತದಾರರಿಗೆ ಯಾವುದೇ ವಿಧವಾದ ತೊಂದರೆಯಾಗದ ರೀತಿ ಮಾಡಬೇಕಾದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ರಾಜಕಾರಣಿಗಳು, ಚುನಾಯಿತ ಪ್ರತಿನಿಧಿಗಳು ಕೆಲಸ ಮಾಡುವುದು ಕಷ್ಟವಿರುವ ಪರಿಸ್ಥಿತಿಯಲ್ಲಿ ಇವರು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಬಡಾವಣೆ ರಚನೆಯಾಗಿ 20 ವರ್ಷವಾದರೂ ಅನೇಕ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಮುಖ ನಾಲ್ಕು ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಕಸ ವಿಲೇವಾರಿ, ಕುಡಿಯುವ ನೀರಿನ ಸಮಸ್ಯೆ ಇದೆ. ಇದು ಆರೋಗ್ಯದ ದೃಷ್ಟಿಯಿಂದ ಅನಿವಾರ್ಯ. ಆದರೆ ಖಾಸಗಿ ಬಡಾವಣೆಯಾಗಿರುವುದರಿಂದ ನಗರಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬಡಾವಣೆಯನ್ನು ನಿರ್ಲಕ್ಷಿಸಿದೆ. ಖಾಸಗಿ ಬಡಾವಣೆಯನ್ನು ನಾವು ಅಭಿವೃದ್ಧಿ ಮಾಡಬೇಕಲ್ಲ ಅಂತ ನಗರಪಾಲಿಕೆಯವರಿಗೆ, ನಗರಪಾಲಿಕೆ ವ್ಯಾಪ್ತಿಯಲ್ಲಿ ನಾವೇಕೆ ಅಭಿವೃದ್ಧಿ ಕೆಲಸ ಮಾಡಬೇಕು ಅಂತ ಮುಡಾದವರಿಗೆ. ಇವೆರಡರ ನಡುವೆ ಬಡಾವಣೆ ಅಭಿವೃದ್ಧಿಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರುಕ್ಮಿಣಿ ಮಾದೇಗೌಡ ಅವರು ನಗರಪಾಲಿಕೆ ಸದಸ್ಯರಾದ ಮೇಲೆ ಈ ಬಡಾವಣೆಯಲ್ಲಿ ಕಸ ವಿಲೇವಾರಿಯ ವ್ಯವಸ್ಥೆಯಾಗಿದ್ದು, ಕುಡಿಯುವ ನೀರಿನ ವ್ಯವಸ್ಥೆಯಾಗಬೇಕಿದೆ. ಜತೆಗೆ ಮೂಲಭೂತ ಸೌಲಭ್ಯಗಳು ಬೇಕಾಗಿದ್ದು, ಬಡಾವಣೆ ಅಭಿವೃದ್ಧಿಯಾಗಬೇಕಾಗಿದೆ. ಅದಕ್ಕಾಗಿ ಮಹಾಪೌರರು, ಉಪಮಹಾಪೌರರು, ಆಯುಕ್ತರಿಗೆ ನಾನು ಮನವಿ ಮಾಡುತ್ತೇನೆ. ನನ್ನಿಂದ ಆಗುವ ಸಹಾಯವನ್ನು ನಾನು ಮಾಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆಯ ನಿವೃತ್ತ ಸೂಪರಿಂಡೆಂಟ್ ಎಸ್.ಜೋಗಯ್ಯ, ಮೈಸೂರು ವಿಶ್ವವಿದ್ಯಾನಿಲಯ ಕ್ರಿಕೆಟ್ ಕೋಚ್ ಡಾ.ಮನ್ಸೂರ್ ಅಹಮದ್, ಬಿಲ್ಡರ್ಸ್ ಮಾಲಿಂನಗರ ಉಪಾಧ್ಯಕ್ಷ ರವಿ ಅವರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: