ಪ್ರಮುಖ ಸುದ್ದಿಮೈಸೂರು

ಎಟಿಎಂನಲ್ಲಿ ಡೆಬಿಟ್ ಕಾರ್ಡ್ ಸ್ಕಿಮ್ಮಿಂಗ್ ಮಾಡಿ ಗ್ರಾಹಕರ ಹಣ ಲಪಟಾಯಿಸಿದ್ದ ತಾಂಜೇನಿಯ ಪ್ರಜೆ, ಮೈಸೂರು ಖಾಸಗಿ ಕಾಲೇಜಿನ ವಿದ್ಯಾರ್ಥಿ ಬಂಧನ

ರಾಜ್ಯ(ಹಾಸನ)ಜ.29:- ಹೊಳೆನರಸೀಪುರದ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಡೆಬಿಟ್ ಕಾರ್ಡ್ ಸ್ಕಿಮ್ಮಿಂಗ್ ಮಾಡಿ ಗ್ರಾಹಕರ ಹಣ ಲಪಟಾಯಿಸಿದ್ದ ತಾಂಜೇನಿಯ ಪ್ರಜೆಯನ್ನು ಬಂಧಿಸಿ, ಡೇಟಾ ಕಳವಿಗೆ ಬಳಸುತ್ತಿದ್ದ ಉಪಕರಣಗಳು, 35ಸಾವಿರ ರೂ. ನಗದು ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್‌ಗೌಡ ತಿಳಿಸಿದರು.

ಬಂಧಿತ ಮೈಸೂರಿನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿಯಾಗಿದ್ದು,  ತಾಂಜೇನಿಯಾ ಮೂಲದ ಆಂಡ್ರ್ಯೂ ರೆನಾಟಸ್ ಸಂಗ (28) ಎಂಬಾತನಾಗಿದ್ದಾನೆ. ಈತ ಮೈಸೂರು ವಿಜಯನಗರದ ಮೂರನೇ ಹಂತದಲ್ಲಿ ಮನೆಯೊಂದನ್ನು ಭೋಗ್ಯಕ್ಕೆ ಪಡೆದು ವಾಸವಿದ್ದ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಂಡ್ರ್ಯೂ 2014ರಲ್ಲಿ ವಿದ್ಯಾಭ್ಯಾಸಕ್ಕೆಂದು ತಾಂಜೇನಿಯಾದ ಮಹಾಲಿಪನಿಂದ ಮೈಸೂರಿಗೆ ಬಂದು ಕಾಲೇಜಿಗೆ ದಾಖಲಾಗಿದ್ದ. ತಾನು ಐಷಾರಾಮಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಸುಲಭವಾಗಿ ಹಣ ಮಾಡುವ ದಾರಿಗಾಗಿ ಹುಡುಕಾಡುತ್ತಿದ್ದ. ಆಗ ಡೆಬಿಟ್ ಕಾರ್ಡ್ ಸ್ಕಿಮ್ಮಿಂಗ್ ಬಗ್ಗೆ ಆತನಿಗಿದ್ದ ಜ್ಞಾನವನ್ನು ಚೀನಾದಿಂದ ಆನ್‌ಲೈನ್ ಮೂಲಕ ತರಿಸಿದ ವಸ್ತುಗಳನ್ನು ಬಳಸಿ ಕಾರ್ಯರೂಪಕ್ಕೆ ಇಳಿದ.

ಯೂ ಟ್ಯೂಬ್‌ನಲ್ಲಿ ಕಾರ್ಡ್ ಸ್ಕಿಮ್ಮಿಂಗ್ (ಡೆಬಿಡ್ ಕಾರ್ಡ್‌ನಲ್ಲಿ ಡೇಟಾ ಕಳವು ಮಾಡಿ, ಮತ್ತೊಂದು ಮ್ಯಾಗ್ನಟಿಕ್ ಪಟ್ಟಿಗೆ ದತ್ತಾಂಶ ನಕಲು ಮಾಡುವುದು) ಬಗೆಗಿನ ವಿಡಿಯೋಗಳನ್ನು ನೋಡಿ ಆ ವಿದ್ಯೆಯನ್ನು ಇನ್ನಷ್ಟು ಸುಲಭಗೊಳಿಸಿಕೊಂಡ.

2 ತಿಂಗಳಿನಿಂದ ದಿಢೀರ್ ಸಿರಿವಂತನಾಗಿದ್ದ ಆಂಡ್ರ್ಯೂ

ಆರೋಪಿ ಆಂಡ್ರ್ಯೂ 2 ತಿಂಗಳ ಹಿಂದೆ ಮೊದಲ ಬಾರಿಗೆ ಮೈಸೂರಿನ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಸ್ಕಿಮ್ಮಿಂಗ್ ಮಾಡಿದ ಕಾರ್ಡ್ ಬಳಸಿ ಸುಮಾರು 1.39 ಲಕ್ಷ ರೂ. ಡ್ರಾ ಮಾಡುವಲ್ಲಿ ಯಶಸ್ವಿಯಾಗಿದ್ದ. ಪದೇ ಪದೆ ಒಂದೇ ಕಡೆ ಹಣ ಡ್ರಾ ಮಾಡುವುದರಿಂದ ಸಿಕ್ಕಿ ಬೀಳಬಹುದು ಎಂದು ಊಹಿಸಿ, ಮೈಸೂರಿನಿಂದ ಹೊರ ಬಂದು ರಸ್ತೆ ಬದಿಯಲ್ಲಿನ ಎಟಿಎಂ ಗಳನ್ನು ತನ್ನ ಕುಕೃತ್ಯಗಳಿಗೆ ಉಪಯೋಗಿಸಿಕೊಳ್ಳಲು ಆರಂಭಿಸಿದ್ದ ಎಂದು ಮಾಹಿತಿ ನೀಡಿದರು.

ಎಟಿಎಂ ಗೆ ಹಣ ತೆಗೆಯಲು ಉಪಕರಣ ಅಳವಡಿಸಿದ್ದು ಅದನ್ನು ಅಲ್ಲಿಯೇ ಬಿಟ್ಟು ಹೋಗಿದ್ದ. ಅದನ್ನು ತೆಗೆಯಲು ಬಂದೇ ಬರುತ್ತಾನೆಂದು ಪೊಲೀಸರು ಕಾದು ಕುಳಿತಿದ್ದರು. ಪೊಲೀಸರ ನಿರೀಕ್ಷೆ ಸುಳ್ಳಾಗಿರಲಿಲ್ಲ. ಅವನು ಉಪಕರಣ ತೆಗೆಯಲು ಬಂದ. ಸ್ಥಳದಲ್ಲಿ ಉಪಕರಣ ಇರದಿರುವುದಕ್ಕೆ ಕಂಗಾಲಾಗಿ ಕಾರಿನ ಬಳಿ ಬಂದ, ಅವನು ಬರುತ್ತಿದ್ದಂತೆಯೇ ಪೊಲೀಸರು ಆತನನ್ನು ಸುತ್ತುವರಿದರು. ಅವನು ತನ್ನೆರಡು ಕೈಗಳನ್ನು ಜೇಬಿಗಿಳಿಸಿದ್ದ. ಅವನ ಬಳಿ ಆಯುಧಗಳಿರಬಹುದು.  ಅಪಾಯ ಸಂಭವಿಸಬಹುದೆಂದು ತಿಳಿದು ಮುಂಜಾಗರೂಕರಾಗಿಯೇ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: