
ಪ್ರಮುಖ ಸುದ್ದಿ
ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ಕೊಡಗು ಯುವ ಕಾಂಗ್ರೆಸ್ ಖಂಡನೆ
ರಾಜ್ಯ(ಮಡಿಕೇರಿ) ಜ.30 :- ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಇತ್ತೀಚೆಗೆ ಮಾದಾಪುರದಲ್ಲಿ ನೀಡಿರುವ ಪ್ರಚೋದನಾಕಾರಿ ಹೇಳಿಕೆ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ವೈಯುಕ್ತಿಕ ಜೀವನವನ್ನು ವಿನಾಕಾರಣ ಕೆದಕಿರುವ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಎಸ್.ಪಿ. ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಭ್ಯರ ಮತ್ತು ಪ್ರಜ್ಞಾವಂತರ ನಾಡು ಕೊಡಗಿನಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಕೇಂದ್ರ ಸಚಿವರು ತಮ್ಮ ಸ್ಥಾನಕ್ಕೆ ಅಗೌರವ ತೋರಿದ್ದಾರೆ ಎಂದು ಟೀಕಿಸಿದ್ದಾರೆ.
ಶಾಂತಿ, ಸೌಹಾರ್ದತೆಯ ನೆಲೆಗಟ್ಟಿನಲ್ಲಿ ಸಾಮರಸ್ಯದ ಜೀವನ ನಡೆಸುತ್ತಿರುವ ಜಿಲ್ಲೆಯ ಜನರ ಮಧ್ಯೆ ಒಡಕು ಮೂಡಿಸುವ ರೀತಿಯಲ್ಲಿ ಅನಂತಕುಮಾರ್ ಹೆಗಡೆ ಅವರು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಹನೀಫ್, ಸಚಿವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಮತ್ತು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಇತ್ತೀಚಿಗೆ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭ ಜಾತಿ, ಮತ, ಭೇದ, ಪಂಗಡ ಮರೆತು ಕೊಡಗಿನ ಜನತೆ ಒಗ್ಗಟ್ಟಾಗಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಪರಸ್ಪರ ನೋವಿಗೆ ಸ್ಪಂದಿಸಿ ಇತರರಿಗೆ ಮಾದರಿಯಾಗಿದ್ದರು. ಇದರಿಂದ ಅಸೂಯೆಗೊಂಡಿರುವ ಕೇಂದ್ರ ಸಚಿವರು ಸಾಮರಸ್ಯವನ್ನು ಕದಡುವ ವಿಫಲ ಯತ್ನ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಹಿಂದೆಯೂ ಸಂವಿಧಾನ ಬದಲಿಸುವುದಾಗಿ ಹೇಳಿಕೆ ನೀಡಿ ಅನಂತಕುಮಾರ್ ಹೆಗಡೆ ಅವರು ದೇಶದಾದ್ಯಂತ ವ್ಯಾಪಕ ಖಂಡನೆಗೆ ಒಳಗಾಗಿದ್ದರು. ಸಂವಿಧಾನ ಬದ್ಧವಾಗಿ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಇವರನ್ನು ವಜಾ ಮಾಡುವುದನ್ನು ಬಿಟ್ಟು ಜಾಣ ಮೌನದ ಮೂಲಕ ಮತ್ತಷ್ಟು ಪ್ರೋತ್ಸಾಹ ನೀಡುತ್ತಿರುವುದು ಬೇಸರದ ವಿಚಾರವಾಗಿದೆ.
ಸಚಿವ ಅನಂತಕುಮಾರ ಹೆಗಡೆ ಅವರು ಕೊಡಗಿನಲ್ಲಿ ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಶಾಂತಿಪ್ರಿಯ ಪ್ರಜ್ಞಾವಂತ ಯುವ ಸಮೂಹ ಪ್ರಚೋದನೆಗೆ ಮಾನ್ಯತೆ ನೀಡುವುದಿಲ್ಲ ಮತ್ತು ಸಮಾಜವನ್ನು ವಿಭಜಿಸಿ ಆಳುವ ಕ್ಷುಲ್ಲಕ ರಾಜಕಾರಣದ ಬಗ್ಗೆ ಜನತೆ ಎಚ್ಚೆತ್ತುಕೊಂಡಿದ್ದಾರೆ ಎಂದು ಹನೀಫ್ ತಿಳಿಸಿದ್ದಾರೆ.
ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಮೇಲೆ ನೈಜ ಗೌರವವಿದ್ದರೆ ಕಾನೂನಿಗೆ ವಿರುದ್ಧವಾಗಿ ಹೇಳಿಕೆ ನೀಡಿರುವ ಸಚಿವರನ್ನು ಸಂಪುಟದಿಂದ ಕೈಬಿಡಬೇಕೆಂದು ಅವರು ಒತ್ತಾಯಿಸಿದ್ದಾರೆ. (ಕೆಸಿಐ,ಎಸ್.ಎಚ್)