ತುರ್ತು ಮಾಹಿತಿಮೈಸೂರು

ದಸರಾ ವಿಶೇಷ: ಗಾಲಿಗಳ ಮೇಲೆ ಅರಮನೆಗಳ ದರ್ಶನ ಮಾಡಿಸುವ ‘ಪ್ಯಾಲೇಸ್ ಆನ್ ವೀಲ್ಸ್’

ನಾಡ ಹಬ್ಬ ಮೈಸೂರು ದಸರಾ ವಿಶೇಷತೆಗಳ ಆಗರ. ಸಂಪ್ರದಾಯಿಕ ಕಾರ್ಯಕ್ರಮಗಳ ಜೊತೆಗೆ ವರ್ಷದಿಂದ ವರ್ಷಕ್ಕೆ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತ್ತಷ್ಟು ಶ್ರೀಮಂತಗೊಳ್ಳುತ್ತಿದೆ. ವಿಶ್ವವಿಖ್ಯಾತ ದಸರಾ ಹಬ್ಬವನ್ನು ಕಣ್ಮನ ತುಂಬಿಕೊಳ್ಳುವುದೇ ಒಂದು ಸುದೈವ.

ಬರುವ ಅಕ್ಟೋಬರ್ 1 ರಿಂದ 11 ರ ವರೆಗೆ ನಡೆಯಲಿರುವ ದಸರಾ ಮಹೋತ್ಸವಕ್ಕೆ ಆಗಮಿಸುವ ದೇಶ ವಿದೇಶಗಳ ಪ್ರವಾಸಿಗರ ಮನಸ್ಸಿನಲ್ಲಿ ದಸರಾ ಅನುಭವವನ್ನು ಅವಿಸ್ಮರಣೀಯವಾಗಿಸಲು ಜಿಲ್ಲಾಡಳಿತವು ಹಲವಾರು ವಿನೂತನ ಪ್ರಯೋಗಗಳನ್ನು ನಿರಂತರವಾಗಿ ನಡೆಸುತ್ತಿದೆ. ಈ ಬಾರಿಯ ಪಟ್ಟಿಯಲ್ಲಿ ನಾಲ್ಕು ಹೊಸ ಆಕರ್ಷಣೆ ಸೇರ್ಪಡೆಯಾಗಿದ್ದು ಸಾಂಸ್ಕೃತಿಕ ನಗರಿಯ ಸಿರಿವಂತಿಕೆಯನ್ನು ಮತ್ತಷ್ಟು ವರ್ಣರಂಜಿತಗೊಳಿಸಲು ಸಿದ್ಧತೆ ನಡೆದಿವೆ.

ಈ ನಿಟ್ಟಿನಲ್ಲಿ ಪ್ಯಾಲೆಸ್ ಆನ್ ವೀಲ್ಸ್ (ಗಾಲಿಗಳ ಮೇಲೆ ಅರಮನೆ), ಶಿಲ್ಪಕಲೆ, ಕಾಷ್ಠ ಶಿಲ್ಪಕಲೆ ಪ್ರದರ್ಶನ, ಜಲ ಸಂರಕ್ಷಣೆ ಕುರಿತು ತಿಳಿವಳಿಕೆ ಪಡೆಯುವುದರ ಜತೆಗೆ ಹೆಲಿಕಾಪ್ಟರ್‍ನಲ್ಲಿ ಕುಳಿತು ಅರಮನೆ ನಗರಿಯ ವೈಮಾನಿಕ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಪ್ಯಾಲೇಸ್ ಆನ್ ವೀಲ್ಸ್

ಯದುವಂಶದ ರಾಜರ ಕಾಲದಲ್ಲಿ ನಿರ್ಮಿಸಿರುವ ಅರಮನೆಗಳು ಒಂದಕ್ಕಿಂತ ಒಂದು ವಿಶೇಷವಾಗಿದ್ದು ಮೈಸೂರಿನಲ್ಲಿ ಒಂಬತ್ತಕ್ಕೂ ಹೆಚ್ಚು ಅರಮನೆಗಳಿವೆ. ಜಗನ್ಮೋಹನ ಅರಮನೆ, ಜಯಲಕ್ಷ್ಮಿ ವಿಲಾಸ, ಲಲಿತ್ ಮಹಲ್, ವಸಂತ ಮಹಲ್, ಲೋಕರಂಜನ್, ಚಿತ್ತ ರಂಜನ್, ಮನೋರಂಜನ್ ಮಹಲ್‍ಗಳು ಸೇರಿದ್ದು, ಮೈಸೂರು ಅರಮನೆಗಳ ಚೆಲುವಿಗೆ ಮನಸೋಲದವರೆ ಇಲ್ಲ. ದಸರಾಗೆ ಬಂದವರು ‘ಅರಮನೆಗಳ ದರ್ಶನ ಪ್ಯಾಕೇಜ್’ ಅಡಿ ಈ ಎಲ್ಲಾ ಅರಮನೆಗಳನ್ನು ಒಂದೇ ದಿನದಲ್ಲಿ ವೀಕ್ಷಿಸಲು ಕೆ.ಎಸ್.ಆರ್.ಟಿ.ಸಿ. ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದ ಸಹಯೋಗದಲ್ಲಿ ‘ವೊಲ್ವೊ’ ಬಸ್ಸುಗಳ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಈ ಬಗ್ಗೆ www.mysoredasara.gov.in ದಸರಾ ವೆಬ್ ಸೈಟ್ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.

ನಾಲ್ವಡಿ ಕೃಷ್ಣರಾಜ ಒಡೆಯರ್‍ ಅವರ ಪಟ್ಟಾಭಿಷೇಕ ಮತ್ತು ವಿವಾಹ ಮಹೋತ್ಸವ ನೆರವೇರಿದ ಜಗನ್ಮೋಹನ ಅರಮನೆಯು ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು. ಮೈಸೂರು ವಿವಿಯ ವ್ಯಾಪ್ತಿಯಲ್ಲಿರುವ ಜಯಲಕ್ಷ್ಮೀ ವಿಲಾಸ ಅರಮನೆಯಲ್ಲಿ ಜಾನಪದ ಮತ್ತು ಪುರಾತತ್ವ ವಸ್ತು ಸಂಗ್ರಹಾಲಯವಿದೆ, ಕೇವಲ ಸ್ವದೇಶಿ ವಸ್ತುಗಳಿಂದಲೇ ನಿರ್ಮಾಣಗೊಂಡಿರುವ ಅಲೋಕ ಅರಮನೆ, ವಿಶಿಷ್ಠ ವಿನ್ಯಾಸದ ಲಲಿತ್ ಮಹಲ್ ಪ್ಯಾಲೇಸ್ ಮನೋಹರವಾಗಿದ್ದು ಇಂದಿಗೂ ನವೀನತೆಯನ್ನು ಕಾಪಾಡಿಕೊಂಡಿದೆ.

 ಆನ್ ಲೈನ್  ಬುಕ್ಕಿಂಗ್: ದಸರಾ ಮಹೋತ್ಸವ ನಡೆಯುವ 10 ದಿನಗಳ ಕಾಲವೂ ಬೆಳಿಗ್ಗೆಯಿಂದ ಸಂಜೆಯವರೆಗೆ ಗಾಲಿಗಳ ಮೇಲೆ ಅರಮನೆ ವೀಕ್ಷಣೆಗೆ ಅವಕಾಶ ಇದ್ದು, ಇವುಗಳ ದರ್ಶನಕ್ಕೆ ಕೌಟುಂಬಿಕ (ಫ್ಯಾಮಿಲಿ) ಮತ್ತು ವ್ಯಕ್ತಿಗತ (ಇಂಡಿವಿಜುಯಲ್) ಪ್ಯಾಕೇಜ್‍ಗಳನ್ನು ನೀಡಲಾಗಿದ್ದು ಲಲಿತ್ ಮಹಲ್‍ನಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಸಹ ಇದ್ದು, ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ, ಆನ್ ಲೈನ್ ಮೂಲಕವೂ ಪ್ರವಾಸಿಗರು ಮುಂಗಡವಾಗಿ ಬುಕ್ಕಿಂಗ್ ಮಾಡಬಹುದು. ಪ್ರವಾಸಿಗರ ಸ್ಪಂದನೆ ಆಧರಿಸಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಚನೆ ಇದೆ. ಕಾರ್ಯಕ್ರಮ ವಿವರ ದಸರಾ ವೆಬ್ ಸೈಟ್‍ನಲ್ಲೂ ಲಭ್ಯವಾಗಲಿದೆ.

Leave a Reply

comments

Related Articles

error: