ದೇಶ

ಶೀತ ಸ್ಫೋಟ: ಉತ್ತರ ಭಾರತದಲ್ಲಿ ಭೀಕರ ಚಳಿ

ನವದೆಹಲಿ,ಜ.30- ಆರ್ಕ್ಟಿಕ್ ಪ್ರದೇಶದಲ್ಲಿ ಸಂಭವಿಸಿರುವ ಶೀತ ಸ್ಫೋಟ ಉತ್ತರ ಭಾರತದಲ್ಲಿನ ಈ ಬಾರಿಯ ಭೀಕರ ಚಳಿಗೆ ಕಾರಣವಾಗಿದೆ ಎಂದು ಭಾರತದ ಹವಾಮಾನ ಇಲಾಖೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರ್ಕ್ಟಿಕ್ ಪ್ರದೇಶದಲ್ಲಿ ಡಿಸೆಂಬರ್ ಕೊನೆಗೆ ಉಂಟಾಗಿರುವ ಶೀತಸ್ಫೋಟ ಇದೀಗ ದಕ್ಷಿಣಾಭಿಮುಖವಾಗಿ ಶೀತಗಾಳಿ ಬೀಸಲು ಕಾರಣವಾಗಿದೆ ಎನ್ನುವುದು ತಜ್ಞರ ಅಭಿಮತ.

ಆರ್ಕ್ಟಿಕ್ ಪ್ರದೇಶದ ಶೀತಸ್ಫೋಟ ದಕ್ಷಿಣಾಭಿಮುಖವಾಗಿದ್ದು, ಯೂರೋಪ್ ಹಾಗೂ ಅಮೆರಿಕಾಕ್ಕೆ ಹರಡುತ್ತಿದೆ. ಪಶ್ಚಿಮಾಭಿಮುಖ ತೆರೆಗಳನ್ನು ಇದು ದುರ್ಬಲಗೊಳಿಸಿದೆ. ಇದು ಸಾಮಾನ್ಯವಾಗಿ ಉತ್ತರ ಭಾರತದತ್ತ ಬೀಸುವ ಪಶ್ಚಿಮಾಭಿಮುಖ ಪ್ರಕ್ಷುಬ್ಧತೆಯನ್ನು ದಕ್ಷಿಣಾಭಿಮುಖವಾಗಿ ತಿರುಗಿಸಿದೆ. ಇದು ಚಳಿಯನ್ನು ದಕ್ಷಿಣ ಯೂರೋಪ್ನಿಂದ ಉತ್ತರ ಭಾರತದತ್ತ ತಿರುಗಿಸಿದೆ ಎಂದು ಐಎಂಡಿ ಧೀರ್ಘಾವಧಿ ಮುನ್ಸೂಚನೆ ವಿಭಾಗದ ಮುಖ್ಯಸ್ಥ ಡಿ.ಶಿವಾನಂದ ಪೈ ಹೇಳಿದ್ದಾರೆ.

ಉತ್ತರ ಭಾರತ ಮೈ ನಡುಗುವ ಚಳಿಗೆ ನಲುಗಿದ್ದು, ರಾಜಸ್ಥಾನದ ಚುರು ಪ್ರದೇಶದಲ್ಲಿ ಉಷ್ಣಾಂಶ -1.1 ಡಿಗ್ರಿ ಸೆಲ್ಷಿಯಸ್ಗೆ ಕುಸಿದಿದೆ. ಇದಕ್ಕೆ ಧ್ರುವ ಪ್ರದೇಶದ ಸುಳಿಗಾಳಿ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಯೂರೋಪ್ನಲ್ಲಿ ಭೀಕರ ಚಳಿಗೆ ಇದು ಕಾರಣವಾಗಿದ್ದು, ಅಮೆರಿಕಾದಲ್ಲೂ ದಕ್ಷಿಣಾಭಿಮುಖವಾದ ಗಾಳಿ ಭಾರಿ ಹಿಮಪಾತಕ್ಕೆ ಕಾರಣವಾಗಿದೆ ಎಂದು ವಿವರಿಸಿದ್ದಾರೆ.

ಮಂಗಳವಾರ ಜಮ್ಮು ಕಾಶ್ಮೀರದ ಪೆಹಲ್ಗಾಂವ್ನಲ್ಲಿ -13.7 ಡಿಗ್ರಿ, ಶ್ರೀನಗರದಲ್ಲಿ -5.4 ಡಿಗ್ರಿ, ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 0.8 ಡಿಗ್ರಿ, ಮುಕ್ತೇಶ್ವರದಲ್ಲಿ -1.5 ಡಿಗ್ರಿ, ಉತ್ತರಾಖಂಡದಲ್ಲಿ 0.1 ಡಿಗ್ರಿ, ಪಂಜಾಬ್ ಅದಂಪುರ ಮತ್ತು ಅಮೃತಸರದಲ್ಲಿ ಕ್ರಮವಾಗಿ 1.1 ಡಿಗ್ರಿ ಹಾಗೂ 1.5 ಡಿಗ್ರಿ, ದೆಹಲಿಯಲ್ಲಿ 4.4 ಡಿಗ್ರಿ, ಪಶ್ಚಿಮ ಉತ್ತರ ಪ್ರದೇಶದಲ್ಲಿ 3.1 ಡಿಗ್ರಿ, ರಾಜಸ್ಥಾನದ ಭಿವಾರಾದಲ್ಲಿ 0.8 ಡಿಗ್ರಿ ಹಾಗೂ ಮೌಂಟ್ ಅಬು ಪ್ರದೇಶದಲ್ಲಿ 0 ಡಿಗ್ರಿ ಉಷ್ಣಾಂಶ ದಾಖಲಾಗಿದೆ. (ಎಂ.ಎನ್)

Leave a Reply

comments

Related Articles

error: