ಮೈಸೂರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ : ಗ್ರಾ.ಪಂ.ನೌಕರರಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ  ಕರ್ನಾಟಕ ರಾಜ್ಯ ಗ್ರಾಮಪಂಚಾಯತ್ ನೌಕರರ ಸಂಘದ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರಿನಲ್ಲಿ  ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೈಸೂರು ಜಿಲ್ಲೆಯ 268 ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕರವಸೂಲಿಗಾರ, ಗುಮಾಸ್ತ, ಕಂಪ್ಯೂಟರ್ ಆಪರೇಟರ್, ವಾಟರ್ ಮ್ಯಾನ್, ಎಲೆಕ್ಟ್ರಿಷಿಯನ್, ಕಚೇರಿ ಸಹಾಯಕ, ಪೌರ ಕಾರ್ಮಿಕರು ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ನೌಕರರು ಗ್ರಾಮೀಣಾಭಿವೃದ್ಧಿಗಾಗಿ ಕುಡಿಯುವ ನೀರು, ವಿದ್ಯುತ್ ದೀಪ, ಸ್ವಚ್ಛತೆ ಕರವಸೂಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮದ ಅನುಷ್ಟಾನದಲ್ಲಿ ತಮ್ಮನ್ನು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮಪಂಚಾಯತ್ ಕೆಲಸವನ್ನೇ ನಂಬಿಕೊಂಡು ದುಡಿಯುತ್ತಿರುವ ನೌಕರರಿಗೆ ಜಿಲ್ಲೆಯ ಬಹುತೇಕ ಗ್ರಾಮಪಂಚಾಯತ್ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ವೇತನ ಜಾರಿಯಾಗಿರುವುದಿಲ್ಲ. ಸರ್ಕಾರಿ ಆದೇಶಕ್ಕೆ ವಿರುದ್ಧವಾಗಿ ತಿಂಗಳಿಗೆ ಮೂರು ಸಾವಿರ, ನಾಲ್ಕುಸಾವಿರ ವೇತನ ನೀಡಿ ನೌಕರರಿಗೆ ಅನದಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಖಾಲಿಯಿರುವ ಬಿಲ್ ಕಲೆಕ್ಟರ್ ಹುದ್ದೆಗೆ ಅದೇ ಪಂಚಾಯತ್ ನಲ್ಲಿ ಅರ್ಹರಿರುವ ನೌಕರರಿಗೆ ಮುಂಬಡ್ತಿ ನೀಡದೇ ಹೊರಗಿನವರನ್ನು ನೇಮಕಗೊಳಿಸಿಕೊಳ್ಳುವ ಪ್ರವೃತ್ತಿ ನಡೆಯುತ್ತಿದೆ ಎಂದು ಆರೋಪಿಸಿದರು. ಸರ್ಕಾರ ನಿಗದಿಪಡಿಸಿದ ಕನಿಷ್ಠವೇತನವನ್ನು ಜಾರಿಗೊಳಿಸಿ, ಬಾಕಿ ಇರುವ ವೇತನವನ್ನು ತಕ್ಷಣ ಬಟವಾಡ ಮಾಡಿ, ನಿವೃತ್ತಿಯಾದ ನೌಕರರಿಗೆ ನಿವೃತ್ತಿಯಾದ  ಒಂದು ತಿಂಗಳೊಳಗೆ ಉಪಧನ ನೀಡಿ, ಎಲ್ಲಾ ಮೂಲಗಳಿಂದ ತೆರಿಗೆ ಸಂಗ್ರಹದಲ್ಲಿ ಸಿಬ್ಬಂದಿಗಳಿಗೆ ಸಂಬಳ ನೀಡಿ ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

Leave a Reply

comments

Related Articles

error: