ಪ್ರಮುಖ ಸುದ್ದಿ

ಮಳೆಹಾನಿ ಪರಿಹಾರ ಕಾರ್ಯ ವಿಳಂಬ : ಕೋಟ ಶ್ರೀನಿವಾಸ ಪೂಜಾರಿ ಅಸಮಾಧಾನ : ಹೋರಾಟದ ಎಚ್ಚರಿಕೆ

ರಾಜ್ಯ(ಮಡಿಕೇರಿ) ಜ.30 :- ಕೊಡಗಿನಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ಮರಳಿ ಬದುಕು ಕಟ್ಟಿ ಕೊಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸನದಲ್ಲಿ ಈ ಕುರಿತು ಚರ್ಚಿಸುವುದಲ್ಲದೆ, ಸಂತ್ರಸ್ತರ ಪರವಾಗಿ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡುವ ಕಾಮಗಾರಿಯ ಪ್ರಗತಿ ಅತ್ಯಂತ ವಿಳಂಬಗತಿಯದ್ದಾಗಿದ್ದು, ಮಳೆಗಾಲದ ಒಳಗಾಗಿ ಮನೆಗಳ ನಿರ್ಮಾಣ ಕಾರ್ಯ  ಪೂರ್ಣಗೊಳ್ಳುವುದು ಅಸಾಧ್ಯವೆಂದು ಅಭಿಪಾಯಪಟ್ಟರು. ವಸತಿ ಸಚಿವ ಯು.ಟಿ.ಖಾದರ್ ಅವರು ಸ್ಥಳ ಪರಿಶೀಲನೆ ನಡೆಸಿ, ಶೀಘ್ರವೇ ಮನೆಗಳನ್ನು ನಿರ್ಮಿಸಿ ಕೊಡಲು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಸಂತ್ರಸ್ತರ ಪರವಾಗಿ ಹೋರಾಟ ನಡೆಸುವುದಾಗಿ ತಿಳಿಸಿದರು.

ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯಲ್ಲಿ 3849 ಮಂದಿಯ ಮನೆಗಳು ಪೂರ್ಣ ಪ್ರಮಾಣ ಸೇರಿದಂತೆ ವಿವಿಧ ಹಂತಗಳಲ್ಲಿ  ಹಾನಿಗೊಳಗಾಗಿವೆ. ಇವರೆಲ್ಲರಿಗೂ ಮನೆಗಳ ನಿರ್ಮಾಣ ಮಾಡಿಕೊಡಬೇಕಾದ ಹಂತದಲ್ಲಿ ಸರ್ಕಾರ 840 ಮಂದಿ ಸಂತ್ರಸ್ತರಿಗಷ್ಟೆ ಮನೆಗಳನ್ನು ನಿರ್ಮಿಸಲು ಮುಂದಾಗಿದೆಯೆಂದು ಬೇಸರ ವ್ಯಕಪಡಿಸಿದರು.

ಮಾದಾಪುರದ ಜಂಬೂರಿನಲ್ಲಿ 400 ಮನೆಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದರೂ ಇಲ್ಲಿಯವರೆಗೂ ಕನಿಷ್ಠ ಹತ್ತು ಮನೆಗಳನ್ನು ಪೂರೈಸಿ ವಿತರಿಸುವ ಕಾರ್ಯ ನಡೆದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಮನೆಗಳನ್ನು ನಿರ್ಮಸಿಕೊಡಲು ಹಲವು ಸಂಘಸಂಸ್ಥೆಗಳು ಮುಂದಾಗಿದ್ದರು ಆ ನೆರವನ್ನು ಪಡೆಯುವಲ್ಲಿ ಸರ್ಕಾರ ತೀವ್ರ ನಿರ್ಲಕ್ಷ್ಯವನ್ನು ತೋರಿದೆ. ಪಲಿಮಾರು ಮಠಾಧೀಶರು 40 ಮನೆಗಳನ್ನು ಕಟ್ಟಿಕೊಡುವುದಾಗಿ ಪತ್ರ ಬರೆದಿದ್ದಾರೆ. ಆದರೆ, ಅವರಿಗೆ ನೆರವಿನ ಹಣವನ್ನು ಸರ್ಕಾರಕ್ಕೆ ನೀಡಿ ಎಂದು ಉಡಾಫೆಯಿಂದ ಆಡಳಿತ ವುವಸ್ಥೆ ಉತ್ತರಿಸಿದೆ. ಇನ್ಫೋಸಿಸ್‍ನ ಸುಧಾಮೂರ್ತಿಯವರು 25 ಕೋಟಿ ರೂ. ವೆಚ್ಚದಲ್ಲಿ 250 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಹೀಗಿದ್ದೂ, ಅವರಿಗೆ ಮನೆಗಳನ್ನು ನಿರ್ಮಿಸಲು ಕನಿಷ್ಠ ಸಮರ್ಪಕ ಜಾಗ ತೋರಿಸುವ ಕಾರ್ಯವನ್ನೂ ಮಾಡದೆ, ಅವರ ಕೊಡುಗೆಯನ್ನು ನಿರ್ಲಕ್ಷಿಸುವ ಕಾರ್ಯ ಸರ್ಕಾರದಿಂದ ನಡೆದಿದೆ. ಸೇವಾಭಾರತಿ ಸಂಘಟನೆ 40 ಮನೆಗಳನ್ನು ನಿರ್ಮಿಸಿಕೊಡಲು ಮುಂದೆ ಬಂದಿದ್ದರೂ ಸರ್ಕಾರ ಸ್ಪಂದಿಸಿಲ್ಲವೆಂದು ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಸಂಗ್ರಹವಾಗಿರುವ ನೆರವಿನ ಮೊತ್ತದ ಬಗ್ಗೆ ತಾನು ಮಾಹಿತಿಯನ್ನು ಪಡೆದಿದ್ದು, ಅದರಂತೆ 36 ಸಾವಿರ ಮಂದಿ 131.28 ಕೋಟಿ ಹಣವನ್ನು ನೀಡಿದ್ದು, ರಾಜ್ಯ ಸರ್ಕಾರಿ ನೌಕರರು 100 ಕೋಟಿ ನೆರವನ್ನು ನೀಡಿದ್ದಾರೆ. ಇದರಲ್ಲಿ ಯಾವುದಕ್ಕೆ ಎಷ್ಟು ಹಣ ವೆಚ್ಚವಾಗಿದೆ ಎನ್ನುವುದಕ್ಕೆ ಸರ್ಕಾರ ನೀಡಿರುವ ಮಾಹಿತಿಯಂತೆ 7.85 ಕೊಟಿ ರೂ.ಗಳನ್ನು ಸಂತ್ರಸ್ತರಿಗೆ ವಿತರಿಸಲು ಬಟ್ಟೆ, ಬೆಡ್‍ಶೀಟ್ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲು, ಮನೆ ಬಾಡಿಗೆಗೆ 3.36 ಕೋಟಿ ಹಾಗೂ 75 ಕೋಟಿ ರೂ.ಗಳನ್ನು 840 ಮನೆಗಳ ನಿರ್ಮಾಣಕ್ಕೆ ಒದಗಿಸಲಾಗುವುದೆಂದು ತಿಳಿಸಿದೆ. ಇವೆಲ್ಲ ಸೇರಿದರು ಸಾರ್ವಜನಿಕರು ನೀಡಿರುವ 131 ಕೋಟಿ ರೂ.ಗಳಿಗೆ ಸಮನಾಗುವುದಿಲ್ಲ. ಅಲ್ಲದೆ ಇಷ್ಟೆಲ್ಲ ನೆರವು ದಾನಿಗಳಿಂದಲೇ ಬಂದಿದ್ದು, ಸರಕಾರದ ಕೊಡುಗೆಯಾದರು ಏನು ಎಂದು ಅವರು ಪ್ರಶ್ನಿಸಿದರು.

ಪ್ರಾಕೃತಿಕ ವಿಕೋಪದಿಂದ 35 ಸಾವಿರ ರೈತರ 1.40 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿ ಸಂಭವಿಸಿದೆ. ಇವರಲ್ಲಿ 1277 ಕುಟುಂಬಗಳಿಗಷ್ಟೆ ಸರ್ಕಾರ 74 ಲಕ್ಷ ಪರಿಹಾರ ಒದಗಿಸಿದೆ. ಉಳಿದಂತೆ ಅಂದಾಜು 33 ಸಾವಿರಕ್ಕೂ ಹೆಚ್ಚಿನ ಮಂದಿಗೆ ಚಿಕ್ಕಾಸು ಪರಿಹಾರ ದೊರಕಿಲ್ಲವೆಂದು ವಿಷಾದ ವ್ಯಕ್ತಪಸಿದರು.

ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳನ್ನು ವ್ಯವಸ್ಥಿತವಾಗಿ ನಡೆಸುವ ಉದ್ದೇಶಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ‘ಪುನರ್ವಸತಿ ಪ್ರಾಧಿಕಾರ’ ರಚಿಸಿದ್ದರು, ಇಲ್ಲಿಯವರೆಗೆ ಒಂದೇ ಒಂದು ಸಭೆಯನ್ನೂ ನಡೆಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಶ್ರೀನಿವಾಸ ಪೂಜಾರಿ, ಇಂತಹ ಬೇಜವಾಬ್ದಾರಿಗಳ ನಡುವೆ ಇದೀಗ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಹಾನಿಗೊಳಗಾಗಿರುವ ರಸ್ತೆ, ಸೇತುಗೆ ಕಾಮಗಾರಿಗಳಿಗಾಗಿ ಹೊರ ಜಿಲ್ಲೆಯ ಗುತ್ತಿಗೆದಾರರನ್ನು ಕರೆತರುವ ಕಾರ್ಯವಾಗುತ್ತಿದ್ದು, ಇದರ ಅಗತ್ಯವಿಲ್ಲವೆಂದರು.

ಸರಕಾರದ ನಿರ್ಲಕ್ಷ್ಯದ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುವ ಕೆಲಸವನ್ನು ತನ್ನನ್ನು ಒಳಗೊಂಡಂತೆ ಇಲ್ಲಿನ ಶಾಸಕರು ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ತೇಜಸ್ವಿನಿ ರಮೇಶ್ ಮಾತನಾಡಿ, ಕೊಡಗಿನಲ್ಲಿ ಇನ್ನು ಕೆಲವೇ ತಿಂಗಳಿನಲ್ಲಿ ಮತ್ತೆ ಮಳೆಗಾಲ ಆರಂಭಗೊಳ್ಳಲಿದೆ. ಹೀಗಿದ್ದೂ ಇನ್ನೂ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಒಂದೇ ಒಂದು ಮನೆ ನೀಡುವ ಕಾರ್ಯ ನಡೆದಿಲ್ಲ.  ಮಳೆ ಆರಂಭಕ್ಕೂ ಮುನ್ನವೆ ಮನೆ ನಿರ್ಮಾಣಕ್ಕೆ ಅಗತ್ಯವಾದ ಸಾಮಾಗ್ರಿಗಳನ್ನು ಸ್ಥಳಕ್ಕೆ ಸಾಗಿಸವ ಅಗತ್ಯವಿದೆ. ಈಗ ನಿರ್ಮಾಣಗೊಳ್ಳುತ್ತಿರುವ ಮನೆಗಳು ಅತ್ಯಂತ ಚಿಕ್ಕದಾಗಿದ್ದು, ಕನಿಷ್ಠ ಮೂಲಭೂತ ಸೌಲಭ್ಯಗಳಾದರು ಮನೆಗಳಲ್ಲಿ ಇರುವುದು ಬೇಡವೆ ಎಂದು ಪ್ರಶ್ನಿಸಿದರು.

ತನಿಖೆ ನಡೆಯಲಿ

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಸಂತ್ರಸ್ತರಿಗೆ ಬಟ್ಟೆ, ಬೆಡ್‍ಶೀಟ್ ಮೊದಲಾದವುಗಳ ವಿತರಣೆಗೆ 7.85 ಕೋಟಿ ವಿನಿಯೋಗಿಸಲಾಗಿದೆಯೆಂದು ಸರ್ಕಾರ ಮಾಹಿತಿ ನೀಡಿದೆ. ಆದರೆ, ಸಂಕಷ್ಟದ ಅವಧಿಯಲ್ಲಿ ನಾಡಿನಾದ್ಯಂತದಿಂದ ಸಂಘ ಸಂಸ್ಥೆಗಳಿಂದಲೆ ಅಂದಾಜು 500 ಲೋಡ್ ವಸ್ತ್ರಗಳು, ಆಹಾರ ಸಾಮಾಗ್ರಿಗಳು ಬಂದಿದ್ದು, ಇಂದಿಗೂ ಸಾಕಷ್ಟು ಸಾಮಾಗ್ರಿಗಳ ಸಂಗ್ರಹವಿದೆ. ಆದರೂ ಬಟ್ಟೆ ಮತ್ತು ಆಹಾರ ಸಾಮಾಗ್ರಿಗಳ ವಿತರಣೆಗೆ ಇಷ್ಟು ಖರ್ಚು ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಬಳಕೆ ಮಾಡಿರುವ ಹಣದ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಸಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಸಂತ್ರಸ್ತರ ಮನೆಗಳ ನಿರ್ಮಾಣ ಕಾರ್ಯ ಕಳಪೆ ಗುಣಮಟ್ಟದಿಂದ ಕೂಡಿರುವುದಲ್ಲದೆ, ವಿಳಂಬ ಗತಿಯಲ್ಲಿ ನಡೆಯುತ್ತಿದೆ, ಪ್ರಾಕೃತಿಕ ವಿಕೋಪದಿಂದ ಜಲ ಮೂಲಗಳ ಹರಿವು ಬದಲಾವಣೆಯಾಗಿ ನೀರಿನ ಮೂಲಗಳೂ ಬತ್ತಿದ್ದು ನೀರಿನ ಅಭಾವ ತಲೆದೋರುವ ಸಾಧ್ಯತೆಗಳು ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಲಭ್ಯ ಪರಿಹಾರ ನಿಧಿಯನ್ನು ಅತ್ಯಂತ ವ್ಯವಸ್ಥಿತವಾಗಿ ಬಳಕೆ ಮಾಡುವುದು ಅಗತ್ಯವೆಂದು ತಿಳಿಸಿದರು.

ಮದ್ಯ ನಿಷೇಧ ಹೋರಾಟಕ್ಕೆ ಬಿಜೆಪಿ ಬೆಂಬಲ

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಮಹಿಳೆಯರು ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಬೆಂಬಲವನ್ನು ನೀಡಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಈ ಹಿಂದೆಯೇ ಬಿಜೆಪಿ ಸರ್ಕಾರದ ಮುಂದೆ ಮದ್ಯ ನಿಷೇಧದ ಕುರಿತು ವಿಷಯ ಪ್ರಸ್ತಾಪಿಸಿದಾಗ, ಅಬಕಾರಿ ಆದಾಯ ಕಡಿತಗೊಳ್ಳುವ ಅಂಶವನ್ನು ತಿಳಿಸಲಾಗಿತ್ತು. ಅಬಕಾರಿಯಿಂದ 16 ರಿಂದ 17 ಸಾವಿರ ಕೋಟಿ ಆದಾಯ ಲಭ್ಯವಾಗುತ್ತದಾದರೆ, ಇಷ್ಟೇ ಮೊತ್ತವನ್ನು ಕುಡುಕರು ನಡೆಸುವ ದಾಂಧಲೆಯ ನಿಯಂತ್ರಣಕ್ಕೆ ಬಳಕೆ ಮಾಡಬೇಕಾಗುತ್ತದೆ ಎಂದು ವರದಿ ತಿಳಿಸಿದೆ. ಆದ್ದರಿಂದ ಬಿಹಾರ ಮತ್ತು ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲೂ ಮದ್ಯ ಮಾರಾಟ ನಿಷೇಧ ಮಾಡುವುದು ಸೂಕ್ತವೆಂದು ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ.ಹರೀಶ್ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: