ಮೈಸೂರು

ಸತ್ಯಸಾಯಿ ದೇವಳ ಸಾರ್ವಜನಿಕರಿಗೆ ಮುಕ್ತ

ಜೆ.ಪಿ.ನಗರದ ನಿವಾಸಿಯೋರ್ವರು ತಮ್ಮ ಆಸ್ತಿಯನ್ನು ಸತ್ಯಸಾಯಿ ಟ್ರಸ್ಟ್ ಗೆ ಬರೆದಿದ್ದು, ವ್ಯಕ್ತಿಗಳಿಬ್ಬರು ಆಸ್ತಿ ತಮ್ಮದು, ತಾವು ವಾರೀಸುದಾರರು ಎಂದು ತಗಾದೆ ತೆಗೆದು ಎರಡೆರಡು ಬೀಗ ಜಡಿದ ಬೆನ್ನಲ್ಲೇ ಪೊಲೀಸರು ಮಧ್ಯಪ್ರವೇಶಿಸಿದ್ದರು. ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಸಾರ್ವಜನಿಕರು ತಾವೇ ಪೂಜೆ ನಡೆಸಿಕೊಂಡು ಹೋಗುತ್ತೇವೆ. ಬಾಗಿಲು ತೆರೆಯಿರಿ ಎಂದು ಹೇಳಿದ್ದಾರೆ.

ಜೆ.ಪಿ.ನಗರ ನಿವಾಸಿ ಲಕ್ಷ್ಮಿಕಾಂತ ಎಂಬವರು ಕಳೆದ ಒಂದೂವರೆ ತಿಂಗಳ ಹಿಂದೆ ಮರಣವನ್ನಪ್ಪಿದ್ದು, ಅವರು ತಮ್ಮ ಮರಣಕ್ಕೂ ಮುನ್ನ ಪ್ರಸಾದ್ ಎಂಬುವರ ಹೆಸರಿಗೆ ಜೆ.ಪಿ.ನಗರದಲ್ಲಿರುವ 60-40 ಮನೆ ಹಾಗೂ ರಾಮಾನುಜ ರಸ್ತೆಯ 9ನೇ ಕ್ರಾಸ್ ನಲ್ಲಿರುವ 60-40 ನಿವೇಶನವನ್ನು ಸತ್ಯಸಾಯಿ ಟ್ರಸ್ಟಿಗೆ ಬರೆದಿದ್ದರು ಎನ್ನಲಾಗಿದ್ದು, ತನ್ನ ಬಳಿ ಸಂಪೂರ್ಣ ದಾಖಲಾತಿ ಇದೆ ಎನ್ನುತ್ತಿದ್ದಾರೆ. ಭಾನುವಾರ ರಾತ್ರಿ 10ಗಂಟೆಗೆ ಟ್ರಸ್ಟಿಗೆ ಬೀಗ ಹಾಕಿ ತೆರಳಿದ್ದು, ಸೋಮವಾರ ಬೆಳಿಗ್ಗೆ ಬಂದು ನೋಡಿದಾಗ ಇನ್ನೊಂದು ಬೀಗ ಬಿದ್ದಿರುವುದು ಕಂಡು ಬಂತು. ಅದನ್ನು ಭವಾನಿಶಂಕರ್ ಎಂಬವರು ಹಾಕಿದ್ದರು.  ಈ ಆಸ್ತಿಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಸಂಪೂರ್ಣ ದಾಖಲಾತಿ ತಮ್ಮ ಬಳಿಯೂ ಇದೆ ಎನ್ನುತ್ತ, ಸಾಯಿ ಟ್ರಸ್ಟ್ ಗೆ ಬೀಗ ಜಡಿದಿದ್ದರು. ಸೋಮವಾರ ಸ್ಥಳಕ್ಕಾಗಮಿಸಿದ ಪೊಲೀಸರು ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಳಿಸಿಕೊಳ್ಳಲು ತಿಳಿಸಿದ್ದರು. ಆದರೆ ಸಾರ್ವಜನಿಕರು ತಾವು ದೇವರ ಪೂಜೆ ನಡೆಸಬೇಕು. ದೇವಾಲಯ ತೆರೆದಿರುವಂತೆ ನೋಡಿಕೊಳ್ಳಿ. ನಾವು ಪ್ರತಿದಿನ ಪೂಜೆ ಮಾಡುತ್ತೇವೆ. ಬಾಗಿಲು ಮುಚ್ಚಬೇಡಿ ಎಂದು ಪೊಲೀಸರಿಗೆ ಕೇಳಿಕೊಂಡಿದ್ದಾರೆ. ಸ್ಥಳಕ್ಕೆ ವಾರ್ಡ್ ನಂ.4ರ ಸದಸ್ಯ ಸುನಿಲ್ ಭೇಟಿ ನೀಡಿದ್ದು, ಪೊಲೀಸರಿಗೆ ಸಾರ್ವಜನಿಕರಿಗೆ ಸ್ಪಂದಿಸುವಂತೆ ಕೇಳಿಕೊಂಡಿದ್ದಾರೆ. ಇದರಿಂದ ಪೊಲೀಸರು ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿದ್ದಾರೆ.  ಭವಾನಿಶಂಕರ್ ಮತ್ತು ಪ್ರಸಾದ್ ಬಳಿ ನ್ಯಾಯಾಲಯದಲ್ಲಿಯೇ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ತಿಳಿಸಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಮಾಡಿಕೊಟ್ಟಿದ್ದಾರೆ.

Leave a Reply

comments

Related Articles

error: