ಮೈಸೂರು

ನರಭಕ್ಷಕ ಹುಲಿಗೆ ಮೂರನೇ ವ್ಯಕ್ತಿ ಬಲಿ

ಹುಲಿ ದಾಳಿಯಿಂದ ತಪ್ಪಿಸಿಕೊಂಡ ಬಳ್ಳು

ಮೈಸೂರು,ಜ.31:- ಹೆಚ್.ಡಿ.ಕೋಟೆ ಡಿ.ಕುಪ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದೇ ತಿಂಗಳಲ್ಲಿ ಮೂವರು ಹುಲಿದಾಳಿಗೆ ಬಲಿಯಾಗಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕಿನ ತಿಮ್ಮನ ಹೊಸಳ್ಳಿ ಗ್ರಾಮದ ಕೆಂಚ(60)ಎಂಬವರನ್ನು ಹುಲಿ ಕೊಂದಿದ್ದು, ಸುತ್ತಮುತ್ತಲ ಹಾಡಿಗಳು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸೇಬಿನ ಕೊಲ್ಲಿ ಎಂಬಲ್ಲಿ ನಿನ್ನೆ ಸಂಜೆ ಗೆಣಸು ಅಗೆಯುತ್ತಿದ್ದಾಗ ಕೆಂಚ ಅವರ ಮೇಲೆರಗಿದ ಹುಲಿ ಒಂದೇ ಏಟಿಗೆ ಕೊಂದಿದೆ. ಪಕ್ಕದಲ್ಲೇ ಇದ್ದ ಬಾಲಕ ಬಳ್ಳು ಎಂಬಾತನನ್ನು ಕೊಲ್ಲಲು ಅಟ್ಟಾಡಿಸಿದ್ದು, ಆತ ತಕ್ಷಣ ಮರ ಹತ್ತಿ ತಪ್ಪಿಸಿಕೊಂಡಿದ್ದಾನೆ. ಕೆಂಚ ದೇಹದಿಂದ ರಕ್ತ ಕುಡಿಯುತ್ತಿದ್ದ ವೇಳೆ ತನ್ನ ಕೈಲಿದ್ದ ಸರಳನ್ನು ಹುಲಿಯತ್ತ ಬಿಸಾಡಿ ಓಡಿ ಹೋಗಿದ್ದಾನೆ. ಇದಕ್ಕೂ ಮುನ್ನ ನಿನ್ನೆ ಬೆಳಿಗ್ಗೆ ಬಯಲು ಶೌಚಕ್ಕೆ ಹೋಗಿದ್ದ ನಂಜುಂಡ ಎಂಬವರನ್ನೂ ಹುಲಿ ಅಟ್ಟಾಡಿಸಿದೆ. ಈ ಹಿಂದೆ, ಮಧು ಹಾಗೂ ಚಿನ್ನಪ್ಪ ಎಂಬವರನ್ನು ಹುಲಿ ಕೊಂದಿತ್ತು. ಕೇವಲ ಎರಡೇ ದಿನಗಳ ಅಂತರದಲ್ಲಿ ಮತ್ತೋರ್ವರನ್ನು ಬಲಿ ಪಡೆದಿರುವುದು ಗ್ರಾಮಸ್ಥರನ್ನು ಕೆರಳಿಸಿದೆ. ಗ್ರಾಮದ ಮಲ್ಲೇಶ್ ಮಾತನಾಡಿ ಮಾನಿಮೂಲೆ ಹಾಡಿಯಲ್ಲಿ ಯುವಕನನ್ನು ಬಲಿ ಪಡೆದ ದಿನವೇ ಸೂಕ್ತ ಕ್ರಮ ಕೈಗೊಂಡು ಹುಲಿಯನ್ನು ಸೆರೆ ಹಿಡಿಯಬೇಕಿತ್ತು. ಮನುಷ್ಯರ ರಕ್ತದ ರುಚಿಯನ್ನು ನೋಡಿರುವುದುರಿಂದ ಮತ್ತೆ ಮತ್ತೆ ಮನುಷ್ಯರನ್ನು ಕೊಲ್ಲುತ್ತಿದೆ. ಜನರ ಜೀವಗಳನ್ನು ಅರಣ್ಯ ಇಲಾಖಾಧಿಕಾರಿಗಳು ಹೀನಾಯವಾಗಿ ಕಾಣುತ್ತಿದ್ದಾರೆ. ಮನುಷ್ಯರಿಗಿಂತ ಇವರಿಗೆ ಪ್ರಾಣಿಗಳೇ ಹೆಚ್ಚಾಗಿವೆ ಎಂದು ಕಿಡಿ ಕಾರಿದ್ದಾರೆ.ಆದಿವಾಸಿ ಮುಖಂಡ ವಿಜಯ್ ಕುಮಾರ್ ಮಾತನಾಡಿ ಹುಲಿಯನ್ನು ಗುಂಡಿಕ್ಕಿ ಸಾಯಿಸಬೇಕು ಇಲ್ಲದಿದ್ದಲ್ಲಿ ಮತ್ತಷ್ಟು ಜನರನ್ನು ಬಲಿ ತೆಗೆದುಕೊಳ್ಳಲಿದೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: