ಮೈಸೂರು

ಯುವಕರು ನಮ್ಮ ಸಂಸ್ಕೃತಿ ಬಿಟ್ಟು ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ : ಪ್ರತಾಪ್ ಸಿಂಹ

ಪ್ರಸ್ತುತ ಪರಿಸ್ಥಿತಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಇಂದಿನ ಕೆಲ ಯುವಕರು ನಮ್ಮ ಸಂಸ್ಕೃತಿಯನ್ನು ಬಿಟ್ಟು ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿರುವುದು ಕಾರಣ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರಿನ ವಿವೇಕಾನಂದ ವೃತ್ತದಲ್ಲಿ ಕೃಷ್ಣರಾಜ ಕ್ಷೇತ್ರದ ಯುವಮೋರ್ಚಾ ವತಿಯಿಂದ ನಡೆದ ಸ್ವಾಮಿ ವಿವೇಕಾನಂದರ 155 ನೇ ಜಯಂತಿಯ ಆಚರಣೆಯಲ್ಲಿ ಪಾಲ್ಗೊಂಡ ಸಂಸದ ಪ್ರತಾಪ್ ಸಿಂಹ ಮಾತನಾಡಿದರು.

18 ನೇ ಶತಮಾನದಲ್ಲಿ ಕೋಲ್ಕತ್ತಾದ ಸಾಮಾನ್ಯ ಬಡಕುಟುಂಬದಲ್ಲಿ ಜನಿಸಿದ ನರೇಂದ್ರ ಎಂಬ ವ್ಯಕ್ತಿ ಬಾಲ್ಯದಿಂದಲೂ ಹಿಂದೂ ಧರ್ಮದ ಸಂಸ್ಕೃತಿಯನ್ನು ಮತ್ತು ರಾಮಾಯಣ ಮಹಾಭಾರತದ ಘಟನೆಗಳನ್ನು ಮೈಗೂಡಿಸಿಕೊಳ್ಳುವುದರ ಮೂಲಕ ಶ್ರೀರಾಮಚಂದ್ರರ ಪರಮ ಭಕ್ತರಾಗಿದ್ದು ಕಾಲಕ್ರಮೇಣ ರಾಮಕೃಷ್ಣ ಪರಮ ಹಂಸರ ಶಿಷ್ಯನಾಗಿ ಸನಾತನ ಹಿಂದೂ ಧರ್ಮದ ಸಂಸ್ಕೃತಿ ಒಂದೇ, ಇಡಿ ವಿಶ್ವವನ್ನೇ ಒಗ್ಗೂಡಿಸಲೂ ಸಾಧ್ಯವೆಂದು ಅರಿತು ಪ್ರಪಂಚ ಪರ್ಯಟನೆ ಮಾಡುವುದರ ಮೂಲಕ ನಮ್ಮ ಸನಾತನ ಹಿಂದೂ ಧರ್ಮ ಸಂಸ್ಕೃತಿಯ ಪ್ರಚಾರ ಮಾಡಿದರು. ಅವರು ವಿಶೇಷವಾಗಿ ಯುವಜನಾಂಗವನ್ನೇ ಗುರಿಯಾಗಿಟ್ಟುಕೊಂಡು ಪ್ರೇರೇಪಿಸುತ್ತಿದ್ದರು ಎಂದು ತಿಳಿಸಿದರು. ಸ್ವಾಮಿ ವಿವೇಕಾನಂದರವರ ಆದರ್ಶಗಳನ್ನೆ ಇಂದಿನ ಯುವ ಜನಾಂಗ ಅಳವಡಿಸಿಕೊಳ್ಳಬೇಕಾಗಿದೆ ಇಂತಹ ಸಂದರ್ಭದಲ್ಲಿ ಮಾತ್ರ ಸಮಾಜದಲ್ಲಿ ಸಮಾನತೆಯನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.

ಮಂಗಳೂರಿನ ಸಂಸ್ಕಾರ ಭಾರತೀಯ ಪ್ರಮುಖ ಆದರ್ಶ್ ಗೋಕುಲೆ ಮಾತನಾಡಿ, ಇತಿಹಾಸ ಪುರುಷರಾದ ಭಗತ್ ಸಿಂಗ್, ವೀರ ಸಾವರ್ಕರ್, ಮದನ್ ಲಾಲ್ ದಿಂಗ್ರ ಆವರ ದೇಶಭಕ್ತಿಯ ಹೋರಾಟಕ್ಕೆ ಸ್ವಾಮಿ ವಿವೇಕಾನಂದರ ಆದರ್ಶಗಳೆ ಸ್ಫೂರ್ತಿಯಾಗಿದ್ದವು. ಸೈನಿಕರು ಅವರವರ ಕುಟುಂಬದವರನ್ನು ಬಿಟ್ಟು ಸ್ವಾರ್ಥ ಜೀವನಕ್ಕೆ ಬೆಲೆ ಕೊಡದೆ ಪ್ರಾಣದ ಹಂಗನ್ನು ತೊರೆದು ವಿಶ್ವದ ಅತಿ ಎತ್ತರದ ಅಪಾಯಕಾರಿ ಪ್ರದೇಶವಾದ ಹಿಮದಿಂದ ಕೂಡಿರುವ ಸಿಯಾಚಿನ್ ಪ್ರದೇಶದಲ್ಲಿ ದೇಶದ ರಕ್ಷಣೆಗಾಗಿ ಕಾಯುತ್ತಿರುವ ಸೈನಿಕರಿಗೂ ವಿವೇಕಾನಂದರೆ ಸ್ಪೂರ್ತಿ. ಇಂದಿನ ಯುವಕರು ತಮ್ಮ ಸ್ವಾರ್ಥ ಜೀವನವನ್ನು ಬಿಟ್ಟು ಆದರ್ಶ  ಸಮಾಜವನ್ನು ನಿರ್ಮಾಣ ಮಾಡಲು ಕೈ ಜೋಡಿಸಬೇಕೆಂದು ಕರೆ ನೀಡಿದರು.

ಮಾಜಿ ಸಚಿವರಾದ ಎಸ್.ಎ.ರಾಮದಾಸ್ ಮಾತನಾಡಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಪ್ರಚಾರಕ್ಕಾಗಿ ದೇಶ ಪರ್ಯಟನೆ ಮಾಡುವ ಸಂದರ್ಭದಲ್ಲಿ ಮೈಸೂರಿಗೂ ಸಹ ಭೇಟಿ ನೀಡಿದ್ದರು. ಮೈಸೂರಿನ ಕೃಷ್ಣವಿಲಾಸ ರಸ್ತೆಯಲ್ಲಿರುವ ಮಠದಲ್ಲಿ ತಿಂಗಳುಗಟ್ಟಲೆ ತಂಗುವ ಮುಖಾಂತರ ಮೈಸೂರಿನ ಪ್ರಸಿದ್ಧ ವಿದ್ಯಾಸಂಸ್ಥೆಗಳೊಂದಾದ ಸದ್ವಿದ್ಯಾ ಪಾಠಶಾಲೆಯಲ್ಲಿ ಧ್ಯಾನ ಮುಗ್ನರಾಗಿ ಕುಳಿತಿರುತ್ತಿದ್ದ ಸಂದರ್ಭಗಳನ್ನು ಸ್ಮರಿಸಬಹುದಾಗಿದೆ ಎಂದರು. ಇಂತಹ ದೇಶ ಭಕ್ತರ ಆದರ್ಶಗಳನ್ನು ನಮ್ಮ ಯುವಜನಾಂಗ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಭಾರತವನ್ನು ಇಡಿ ವಿಶ್ವದಲ್ಲಿ ಪ್ರಥಮ ಸ್ಥಾನಕ್ಕೆ ತಂದು ನಿಲ್ಲಿಸುವ ಪ್ರಯತ್ನವನ್ನು ಮಾಡಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಭಾಗ ಸಂಘಟನ ಕಾರ್ಯದರ್ಶಿ ಸುರೇಶ ಬಾಬು, ಪಣೀಶ್, ನಗರ  ಪ್ರಧಾನ ಕಾರ್ಯದರ್ಶಿಮೈ.ಪು.ರಾಜೇಶ್, ಉಪಾಧ್ಯಕ್ಷ ಮನೋಜ್ ಕುಮಾರ್,  ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ಬಿ.ವಿ.ಮಂಜುನಾಥ್, ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: