ಕರ್ನಾಟಕ

ಬೆಂಗಳೂರಿನಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಸಿಐಎಸ್ ಎಫ್ ಯೋಧ

ಬೆಂಗಳೂರು: ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ ಎಫ್) ಯೋಧರೊಬ್ಬರು ಸೋಮವಾರದಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸರ್ವಿಸ್ ರೈಫಲ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೂಲತಃ ಮಹಾರಾಷ್ಟ್ರದವರಾಗಿದ್ದು, ಪ್ರಸ್ತುತ  ಬೆಂಗಳೂರಿನಲ್ಲಿ ನೆಲೆಸಿದ್ದ ಸುರೇಶ್ ಗಾಯಕ್ವಾಡ್(28) ಆತ್ಮಹತ್ಯೆ ಮಾಡಿಕೊಂಡ ಯೋಧ ಎಂದು ಗುರುತಿಸಲಾಗಿದೆ.

ಸೋಮವಾರ ಬೆಳಗ್ಗೆ 9.15ರ ಸುಮಾರಿಗೆ ಈ ಘಟನೆ ನಡೆದಿದೆ. ವಿಮಾನ ನಿಲ್ದಾಣದಲ್ಲಿರುವ ವಾಚ್ ಟವರ್ ವೊಂದರಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು. ಸರ್ವಿಸ್ ರಿವಾಲ್ವರ್ ನಿಂದ ತಲೆಗೆ ಶೂಟ್ ಮಾಡಿಕೊಂಡು ಬಿದ್ದದ್ದ ಗಾಯಕ್ವಾಡ್ ರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಪ್ರಾಣಪಕ್ಷಿ ಆದಾಗಲೇ ಹಾರಿಹೋಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಾಥಮಿಕ ತನಿಖೆಯ ಪ್ರಕಾರ ಸುರೇಶ್ ಕೌಟುಂಬಿಕ ಮನಸ್ತಾಪಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದು, ಎರಡು ವಾರಗಳ ಹಿಂದಷ್ಟೇ ಪತ್ನಿಯಿಂದ ವಿಚ್ಚೇದನ ಹೊಂದಿದ್ದರು. ಈ ಎಲ್ಲ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಗುರುವಾರವಷ್ಟೇ ಔರಂಗಬಾದ್ ಜಿಲ್ಲೆಯಲ್ಲಿ ರಜೆಯ ವಿಷಯದಲ್ಲಿ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ಸಿಐಎಸ್ ಎಫ್ ಯೋಧ ಬಲ್ವೀರ್ ಸಿಂಗ್ ತನ್ನ ನಾಲ್ವರು ಹಿರಿಯ ಸಹೋದ್ಯೋಗಿಗಳನ್ನು ಶೂಟ್ ಮಾಡಿ ಹತ್ಯೆ ಮಾಡಿದ್ದರು.

ಭಾನುವಾರದಂದು ಸಿಖ್ ಯೋಧರೊಬ್ಬರು ತಾವು ಜೀವಿಸುತ್ತಿರುವ ಕಠಿಣ ಪರಿಸ್ಥಿತಿಯ ಬಗ್ಗೆ ಪಂಜಾಬ್ ಭಾಷೆಯಲ್ಲಿ ಹಾಡೊಂದನ್ನು ಹಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕುಂದುಕೊರತೆಗಳನ್ನು ಹೇಳಿಕೊಳ್ಳಬೇಡಿ ಎಂದು ಯೋಧರಿಗೆ ಆಗ್ರಹಿಸಿದ್ದರು. ಇಷ್ಟೆಲ್ಲ ವಿವಾದಗಳ ನಡುವೆ ಈಗ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ತೀವ್ರ ಅನುಮಾನಕ್ಕೆಡೆ ಮಾಡಿದೆ.

Leave a Reply

comments

Related Articles

error: