ಕರ್ನಾಟಕಪ್ರಮುಖ ಸುದ್ದಿ

ತಿರುಪತಿ ಮಾದರಿಯಲ್ಲಿ ಮೇಲುಕೋಟೆ ಅಭಿವೃದ್ಧಿ: ಸುಧಾಮೂರ್ತಿ

ಮಂಡ್ಯ (ಫೆ.1): ರಾಜ್ಯ ಪ್ರವಾಸೋದ್ಯಮ ಇಲಾಖೆಯು ಇನ್ಫೋಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ ರಾಮಾನುಚಾರ್ಯರ ಕರ್ಮಭೂಮಿ, ಪವಿತ್ರ ಕ್ಷೇತ್ರವೂ ಆಗಿರುವ ಮೇಲುಕೋಟೆಯನ್ನು ತಿರುಪತಿಗೆ ಸಮಾನವಾಗಿ ಅಭಿವೃದ್ಧಿಗೊಳಿಸಲು ಮುಂದಾಗಿದ್ದು, ಈ ಸಂಬಂಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಲಾಗಿದೆ.

ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಇನ್ಫೋಸಿಸ್ ಫೌಂಡೇಷನ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಮೇಲುಕೋಟೆಯ ಪಾರಂಪರಿಕ ತಾಣಗಳು ಅತ್ಯಂತ ಅಸಡ್ಡೆಗೊಳಗಾಗಿದೆ. ತಿರುಪತಿಗೆ ಸಮಾನವಾದ ಚೆಲುವನಾರಾಯಣ ಮತ್ತು ಯೋಗನರಸಿಂಹಸ್ವಾಮಿಯ ದಿವ್ಯಕ್ಷೇತ್ರ ಅಭಿವೃದ್ಧಿಯಾಗಬೇಕು. ದಸರಾ ಉದ್ಘಾಟನೆಯ ವೇಳೆ ಇಲ್ಲಿಗೆ ಆಗಮಿಸಿದ ನನಗೆ ಕಲ್ಯಾಣಿಯ ಅಶುಚಿತ್ವ ಕಂಡು ಬೇಸರವಾಯಿತು ಎಂದರು.

ಇದೇ ಕಾರಣದಿಂದ ಯೋಗನರಸಿಂಹ ನೀಡಿದ ಪ್ರೇರಣೆಯ ಪರಿಣಾಮ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೊಂದಿಗೆ ನಾನು ಕ್ಷೇತ್ರದ ಅಭಿವೃದ್ಧಿ ಮತ್ತು ಕಲ್ಯಾಣಿಯ ಪುನರುಜ್ಜೀವನ ಬಗ್ಗೆ ಚರ್ಚಿಸಿ ಸರ್ಕಾರದಿಂದ ಅನುಮತಿ ಪಡೆದು ಕಾರ್ಯಾರಂಭ ಮಾಡಿದ್ದೇನೆ. ಅಧಿಕಾರಿಗಳು ಹಾಗೂ ನಾಗರಿಕರ ಸಹಕಾರದಿಂದ ಉತ್ತಮಕಾರ್ಯ ಮಾಡಲಾಗುತ್ತದೆ ಎಂದು ಸುಧಾಮೂರ್ತಿ ಹೇಳಿದರು.

ಇದೇ ವೇಳೆ ವಿಶೇಷ ಆಹ್ವಾನಿತರಾಗಿದ್ದ ಪ್ರವಾಸೋದ್ಯಮ ಇಲಾಖೆ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಮೇಲುಕೋಟೆ ಅಭಿವೃದ್ಧಿಗೆ ಇಲಾಖೆ ಹತ್ತು ಕೋಟಿ ರೂ ಮೀಸಲಿಟ್ಟಿದೆ. ಧನುಷ್ಕೋಟಿಯ ರಸ್ತೆ ನಿರ್ಮಾಣಕ್ಕಾಗಿ 2 ಕೋಟಿ ಮಂಜೂರಾಗಿದ್ದು, ಪ್ರಮುಖ ಬೀದಿಗಳಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲು ನಾಲ್ಕು ಕೋಟಿ ರೂ ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ರಾಮಾನುಜರಿಂದ ಜೀರ್ಣೋದ್ಧಾರಗೊಂಡ ಕ್ಷೇತ್ರ ಈವರೆಗೆ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾಗಿತ್ತು ಇನ್ನು ಮುಂದೆ ಪ್ರವಾಸಿ ಸ್ನೇಹಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಮೇಲುಕೋಟೆ ಪ್ರಖ್ಯಾತ ವೈರಮುಡಿ ಉತ್ಸವವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಪ್ರವಾಸೋಧ್ಯಮ ಚಟುವಟಿಕೆ ಉತ್ತೇಜಿಸುವ ಮೂಲಕ ಉದ್ಯೋಗಾವಕಾಶ ಸೃಷ್ಟಿಸಲಾಗುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮಾತನಾಡಿ, ಮೇಲುಕೋಟೆಯ ಅಭಿವೃದ್ಧಿ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ರೂಪರೇಷೆ ಸಿದ್ಧಮಾಡಲಾಗಿತ್ತು. ಆದರೆ ಕಾರ್ಯಾರಂಭ ಮಾಡಲು ಸಾಧ್ಯವಾಗಿರಲಿಲ್ಲ. ಮೇಲುಕೋಟೆ ಅಭಿವೃದ್ಧಿ ಮಾಡಲು ಇನ್ಫೋಸಿಸ್ ಮುಂದೆ ಬಂದಿದ್ದು ಸರ್ಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದರು. (ಎನ್.ಬಿ)

Leave a Reply

comments

Related Articles

error: