ಮೈಸೂರು

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಅಭಿವೃದ್ಧಿ ಪರ ಬಜೆಟ್ : ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್

ಮೈಸೂರು,ಫೆ.1:- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಈ ಅವಧಿಯ ತನ್ನ ಕೊನೆಯ ಬಜೆಟ್‌ನಲ್ಲಿ ದೇಶಕ್ಕೆ ಅತ್ಯುತ್ತಮ ಕೊಡುಗೆಗಳನ್ನು ನೀಡಿದೆ. ಎಲ್ಲಾ ವರ್ಗಗಳನ್ನು, ಪ್ರಜೆಗಳನ್ನು ಒಳಗೊಂಡ, ಒಂದು‌ ಅಭಿವೃದ್ಧಿ ಪರ ಬಜೆಟ್ ಎಂದು ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ವಿತ್ತ ಸಚಿವ ಪಿಯುಷ್ ಗೋಯಲ್ ಬಜೆಟ್ ಮಂಡಿಸಿದ್ದು, ಸಣ್ಣ ರೈತರ ಅನುಕೂಲಕ್ಕಾಗಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ 6,000 ರೂಪಾಯಿಗಳು ಜಮೆ‌ ಆಗುವುದರಿಂದ ಅವರು ಮಧ್ಯವರ್ತಿಗಳು, ಬ್ಯಾಂಕುಗಳ ಹಿಂದೆ‌ ಓಡಾಡುವ ಪರಿಸ್ಥಿತಿ ಇರುವುದಿಲ್ಲ. ರಾಷ್ಟ್ರ ರಕ್ಷಣಾ ದೃಷ್ಟಿಯಿಂದ 3 ಲಕ್ಷ ಕೋಟಿ ರೂಪಾಯಿಗಳನ್ನು ರಕ್ಷಣಾ ವೆಚ್ಚಕ್ಕೆ ಮೀಸಲಿಡಲಾಗಿದ್ದು ಇದು ಭಾರತೀಯ ಸೇನೆಯ ಸಬಲೀಕರಣ‌ ಹಾಗೂ ರಾಷ್ಟ್ರೀಯ ಭದ್ರತೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವರಿಗೆ 50℅ ವೇತನ ಹೆಚ್ಚಳವನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ.

ಬಹುಶಃ ಇದೇ ಮೊದಲ ಬಾರಿಗೆ ಭಾರತದ ಸರ್ಕಾರ ತನ್ನ ತೆರಿಗೆದಾರರನ್ನು ಸ್ಮರಿಸಿಕೊಂಡಿದ್ದು, ವಿತ್ತ ಸಚಿವರು ತೆರಿಗೆದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಧ್ಯಮ ವರ್ಗವನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಇದಾಗಿದ್ದು, ಸರ್ಕಾರ ಕಾರ್ಪೋರೆಟ್ ಪರ ಎಂದು ಆರೋಪಿಸುತ್ತಿದ್ದವರಿಗೆ ಉತ್ತರ ನೀಡಿದೆ. 5 ಲಕ್ಷ‌ ರೂಪಾಯಿಗಳ ವರೆಗಿನ ಆದಾಯ ತೆರಿಗೆ ವಿನಾಯಿತಿ ಭಾರತೀಯ ಮಧ್ಯಮವರ್ಗದ ಜನತೆಗೆ ಅತ್ಯಂತ ಸಂತೋಷಕರ ನಿರ್ಣಯವಾಗಿದೆ.‌ ಇದರೊಂದಿಗೆ, ಸರಿಯಾದ ಹಣಕಾಸು ಹೂಡಿಕೆಗಳನ್ನು ಮಾಡಿಕೊಂಡಲ್ಲಿ 6.5 ಲಕ್ಷ ರೂಗಳ‌ ತನಕ‌ ಉಳಿಸಿಕೊಳ್ಳಬಹುದಾಗಿದೆ. ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಹೂಡಿಕೆ‌ ಮಾಡಿದ‌ ಮೊತ್ತಕ್ಕೆ‌ ಟಿಡಿಎಸ್ ಹೆಚ್ಚಳ ಹಾಗೂ ಶೈಕ್ಷಣಿಕ ಸಾಲಕ್ಕೆ ತೆರಿಗೆ ವಿನಾಯಿತಿಯನ್ನು ನಾವು ಅಭಿನಂದಿಸಬೇಕಿದೆ. ಗೃಹ ಸಾಲದ ಮೇಲಿನ 2 ಲಕ್ಷ ರೂಪಾಯಿಗಳ ತನಕದ ತೆರಿಗೆ ವಿನಾಯಿತಿ ಜನಸಾಮಾನ್ಯರಿಗೆ ಉಪಕಾರಿಯಾಗಿದೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಈ ಬಜೆಟ್ ಅತ್ಯಂತ ಉತ್ತಮವಾಗಿದ್ದು, ಎಲ್ಲಾ‌ ವರ್ಗಗಳ ಜನತೆಗೆ ಸಂತೋಷ ನೀಡುವಂತಿದೆ. ಈ ಯೋಜನೆಗಳ‌ ಅನುಷ್ಠಾನ ದೇಶದ ಅಭಿವೃದ್ಧಿಗೆ ಕಾರಣವಾಗುವುದು ಖಂಡಿತ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: