ಮೈಸೂರು

ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ : ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್

ಮೈಸೂರು, ಫೆ.1:- ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸೌಲಭ್ಯ ಸಿಗುತ್ತಿದ್ದು ಹೆಚ್ಚಿನ ವಿದ್ಯಾರ್ಥಿಗಳನ್ನು ಪ್ರವೇಶಾತಿ ಪಡೆಯಲು ಈ ಶಾಲೆಯ ಗುಣಮಟ್ಟವನ್ನು  ಅಲ್ಪಸಂಖ್ಯಾತರಿಗೆ ತಲುಪಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಡಿ ಅಲ್ಪಸಂಖ್ಯಾತರ ಮೂಲಭೂತ ಸೌಕರ್ಯಗಳ ಸಾಧನೆಯ ಕುರಿತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು. ಅಲ್ಪಸಂಖ್ಯಾತರು ಹೆಚ್ಚಾಗಿ ಓದುವ ಉರ್ದು ಶಾಲೆಗಳಿಗೆ ಹೆಚ್ಚಿನ ಅನುದಾನ ಬರುತ್ತಿದೆ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‍ಗಳಿಗೆ ಸಾಕಷ್ಟು ಅನುದಾನ ಬರುತ್ತಿದೆ ಹಾಗಾಗಿ ಅಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಬೇಕು, ಅಲ್ಪಸಂಖ್ಯಾತರ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿರುತ್ತಾರೆ ಅವರಿಗೆ ಸರ್ಕಾರದ ಸೌಲಭ್ಯ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಸಾಲ, ನಿರುದ್ಯೋಗಿ ಸಾಲ, ಕ್ರೈಸ್ತ ಅಭಿವೃದ್ಧಿ ಯೋಜನೆಯಡಿ ಸಮುದಾಯ ಭವನ, ಚರ್ಚ್ ದುರಸ್ಥಿ, ಹಾಗೂ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಹೀಗೆ ಹಲವಾರು ಯೋಜನೆಗಳಲ್ಲಿ ಸಿಗುವ ಸೌಲಭ್ಯವು ಅಲ್ಪಸಂಖ್ಯಾತರಿಗೆ ತಲುಪಬೇಕು ಎಂದರು.
ಕೊಳಚೆ ಪ್ರದೇಶಗಳಲ್ಲಿ ವಾಸವಿರುವ ಅಲ್ಪಸಂಖ್ಯಾತರಿಗೆ ಕುಡಿಯುವ ನೀರು, ಬೀದಿ ದೀಪಗಳು, ರಸ್ತೆಗಳು, ಚರಂಡಿ ವ್ಯವಸ್ಥೆಗಳನ್ನು  ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಯಡಿ ಬರುವ ಹಣದಿಂದ ಅಭಿವೃದ್ದಿ ಪಡಿಸಬೇಕು ವಸತಿ ಯೋಜನೆಯಲ್ಲಿ ಎಲ್ಲಾ ಫಲಾನುಭವಿಗಳಿಗೂ ಸೌಲಭ್ಯ ಒದಗಿಸಬೇಕು, ಕೈಗಾರಿಕಾ ಕ್ಷೇತ್ರಗಳಲ್ಲಿ ಉದ್ಯೋಗ ಕಲ್ಪಿಸಿಕೊಡಬೇಕು ಎಂದರು.
ಎಲ್ಲಾ ಇಲಾಖೆಯವರು ನೀಡಿರುವ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಡಿ ಅಲ್ಪಸಂಖ್ಯಾತರ ಅಭಿವೃದ್ಧಿ ಮಾಹಿತಿಯನ್ನು ಪರಿಶೀಲಿಸಿದ ಅವರು ಅಲ್ಪಸಂಖ್ಯಾತರ ಪ್ರಗತಿಯಲ್ಲಿ ಹೆಚ್ಚಿನ ಗಮನವಹಿಸಿ ಕೆಲಸ ಮಾಡಿ ಮುಂದಿನ ದಿನಗಳಲ್ಲಿ ಎಸ್.ಸಿ ಮತ್ತು ಎಸ್.ಟಿ  ಸಭೆಗಳು ನಡೆಯುವ ರೀತಿಯಲ್ಲಿ ಈ ಸಭೆಯು ಕೂಡ ನಡೆಯಬೇಕು ಪ್ರತಿ ತಿಂಗಳು ಪ್ರಗತಿ ಮಾಹಿತಿಯನ್ನು ಸಭೆಯಲ್ಲಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪುಟ್ಟರಾಜು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: