ಪ್ರಮುಖ ಸುದ್ದಿ

ಹೊರ ಜಿಲ್ಲೆಯವರಿಗೆ ಗುತ್ತಿಗೆ : ಸಚಿವರ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ

ರಾಜ್ಯ(ಮಡಿಕೇರಿ )ಫೆ.1 : – ಕೊಡಗು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆಯನ್ನು ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ನೀಡುವ ಕ್ರಮವನ್ನು ಮುಂದಿನ 15 ದಿನಗಳ ಒಳಗಾಗಿ ಸ್ಥಗಿತಗೊಳಿಸದಿದ್ದಲ್ಲ್ಲಿ ರಾಜ್ಯ ಗುತ್ತಿಗೆದಾರರ ಸಹಕಾರದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ರಾಜ್ಯ ಗುತ್ತಿಗೆದಾರರ ಸಂಘದ ಸಂಘಟನಾ ಕಾರ್ಯದರ್ಶಿ ರವಿಚಂಗಪ್ಪ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಉಂಟಾಗುವ ಹಾನಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಮಾತ್ರ ಸ್ಥಳೀಯ ಗುತ್ತಿಗೆದಾರರಿಂದ ಮಾಡಿಸಲಾಗುತ್ತಿದ್ದು, ಬೇಸಿಗೆಯಲ್ಲಿ ಕೈಗೊಳ್ಳಬಹುದಾದ ದೊಡ್ಡ ಮಟ್ಟದ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹೊರಗಿನ ಗುತ್ತಿಗೆದಾರರಿಗೆ ಕೊಡಿಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಕೊಡಗಿನಲ್ಲಿ ಆರು ತಿಂಗಳು ಮಳೆ ಇರುವುದರಿಂದ ಉತ್ತಮವಾದ ಕೆಲಸ ಮಾಡಲು ಬೇಸಿಗೆ ಮೂರು ತಿಂಗಳು ಮಾತ್ರ ಅವಕಾಶವಿರುತ್ತದೆ. ಆದರೆ ಈ ಸಂದರ್ಭ ಗುಣಮಟ್ಟದಲ್ಲಿ ನಿರ್ವಹಿಸಬೇಕಾದ ಕಾಮಗಾರಿಗಳನ್ನು ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಕೊಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆಲವು ರಾಜಕಾರಣಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದು, ಮಳೆಗಾಲದಲ್ಲಿ ಕಷ್ಪಪಟ್ಟು ಕೆಲಸ ನಿರ್ವಹಿಸಿದ ಸ್ಥಳೀಯ ಗುತ್ತಿಗೆದಾರರಿಗೆ ಯಾವುದೇ ಕೆಲಸವಿಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗಿನ ಗುತ್ತಿಗೆದಾರರಿಗೆ ನ್ಯಾಯ ಒದಗಿಸಬೇಕಾದ ಜಿಲ್ಲೆಯ ಶಾಸಕರನ್ನು ಉಸ್ತುವಾರಿ ಸಚಿವರು ತಮ್ಮ ಜೇಬಿನಲ್ಲಿ ಇರಿಸಿಕೊಂಡಿದ್ದಾರೆ ಎಂದು ರವಿಚಂಗಪ್ಪ ಗಂಭೀರ ಆರೋಪ ಮಾಡಿದರು.

ಕೊಡಗಿನ ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಜ.28ರಂದು ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತಾದರೂ, ಜಿಲ್ಲಾ ಸಂಘದ ಅಧ್ಯಕ್ಷರು ಜಾತ್ಯತೀತ ಜನತಾದಳದವರೇ ಆಗಿರುವುದರಿಂದ ಅವರು ಸಚಿವರ ಮಾತನ್ನು ಮೀರಿ ಹೋಗದೆ ಇರುವುದರಿಂದ ಪ್ರತಿಭಟನೆ ನಡೆದಿಲ್ಲವೆಂದರು. ಜಿಲ್ಲಾ ಸಂಘದಿಂದ ಗುತ್ತಿಗೆದಾರರಿಗೆ ನ್ಯಾಯ ದೊರಕುವ ಸಾಧ್ಯತೆ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳ ಒಳಗಾಗಿ ಉಸ್ತುವಾರಿ ಸಚಿವರು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳದಿದ್ದಲ್ಲಿ ರಾಜ್ಯ ಸಂಘದ ಸಹಕಾರ ಪಡೆದು ನೊಂದ ಗುತ್ತಿಗೆದಾರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿರುವುದಾಗಿ ರವಿಚೆಂಗಪ್ಪ ಘೋಷಿಸಿದರು.

ಸೋಮವಾರಪೇಟೆಯ ಗುತ್ತಿಗೆದಾರ ಎ.ಕೆ.ಗಣೇಶ್ ಅವರು ಮಾತನಾಡಿ, ಜಿಲ್ಲೆಯ ಗುತ್ತಿಗೆದಾರರಿಗೆ ಅಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಜವಾಬ್ದಾರಿ ಜಿಲ್ಲೆಯ ಶಾಸಕರು ಹಾಗೂ ಲೋಕಸಭಾ ಸದಸ್ಯರ ಮೇಲಿದೆ. ಉಸ್ತುವಾರಿ ಸಚಿವರು ತಾತ್ಕಾಲಿಕವಾಗಿ ಬಂದು ಹೋಗುವವರಾಗಿದ್ದು, ನಮಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕಾದವರು ಜಿಲ್ಲೆಯ ಜನಪ್ರತಿನಿಧಿಗಳು ಎಂದರು. ಈ ಬಗ್ಗೆ ಶಾಸಕರ ಗಮನ ಸೆಳೆಯಲಾಗಿದೆ, ಆದರೆ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರ ಹೊಸಬೀಡು ಶಶಿ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: