ಪ್ರಮುಖ ಸುದ್ದಿ

18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

ರಾಜ್ಯ(ಮಡಿಕೇರಿ) ಫೆ.2 : – ಪ್ರಕರಣವೊಂದರಲ್ಲಿ ಆರೋಪಿಗಳಾಗಿ ಕಳೆದ 18 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೇರಳ ಮೂಲದ ಮೂವರನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.

ಮಡಿಕೇರಿ ಗ್ರಾಮಾಂತರ ವೃತ್ತದ ಭಾಗಮಂಡಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2001ರಲ್ಲಿ ನಡೆದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಕೊನ್ನೆಕಾಡ್‍ನ ಪಿ.ಜಿ.ರಾಜಪ್ಪನ್, ಕುಂಙಿಕೃಷ್ಣ, ಅಶೋಕಚಾಲ್‍ನ ಪಿ.ಸಿ.ವಿಜು ಹಾಗೂ ಕೊನ್ನೆಕಾಡ್‍ನ ವಿ.ಡಿ.ಜೋಸ್ ಎಂಬವರ ವಿರುದ್ಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದರೆ ಈ ನಾಲ್ವರು ಆರೋಪಿಗಳು ಕಳೆದ 18 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರೆನ್ನಲಾಗಿದೆ. ಈ ಸಂಬಂಧ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪನ್ನೇಕರ್ ಹಾಗೂ ಮಡಿಕೇರಿ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕ ಕೆ.ಎಸ್.ಸುಂದರರಾಜ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ  ಹೆಚ್.ಎನ್.ಸಿದ್ದಯ್ಯ, ಭಾಗಮಂಡಲ ಠಾಣಾ ಎಎಸ್‍ಐ ಅಪ್ಪಾಜಿ ಅವರುಗಳ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು.

ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆರೋಪಿಗಳಾದ ಪಿ.ಜಿ.ರಾಜಪ್ಪನ್, ಕುಂಞಕೃಷ್ಣ ಹಾಗೂ ಪಿ.ಸಿ. ವಿಜು ಎಂಬವರುಗಳನ್ನು ಕೇರಳ ರಾಜ್ಯದ ಬೊಳ್ಳರಿಕುಂಡು ಎಂಬಲ್ಲಿ ಗುರುವಾರ ಪತ್ತೆ ಹಚ್ಚಿದ್ದು, ಶುಕ್ರವಾರ ಅವರುಗಳನ್ನು ನಗರದ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ಮುಮದೆ ಹಾಜರುಪಡಿಸಿದ್ದಾರೆ. ನಾಲ್ಕನೇ ಆರೋಪಿ ವಿ.ಡಿ.ಜೋಸ್ 2013ರ ಜು.15ರಂದು ಸಾವಿಗೀಡಾಗಿದ್ದು, ಈ ಸಂಬಂಧ ನ್ಯಾಯಾಲಯಕ್ಕೆ ಮರಣ ದೃಢೀಕರಣ ಪತ್ರ ಹಾಜರುಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಹೆಚ್.ಎನ್.ಸಿದ್ದಯ್ಯ, ಭಾಗಮಂಡಲ ಠಾಣೆ ಎಎಸ್‍ಐ ಪಿ.ಎ.ಅಪ್ಪಾಜಿ, ಸಿಬ್ಬಂದಿ ಮೋಹನ್, ಚಾಲಕರಾದ ಸುನಿಲ್, ಮತ್ತಿತರರು ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: