ಮೈಸೂರು

ಪ್ರತಿಷ್ಠೆಯ ಕಣವಾದ ಎಪಿಎಂಸಿ ಚುನಾವಣೆ : ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ

ಕಾಂಗ್ರೆಸ್ ಮತ್ತು ಜಾತ್ಯಾತೀತ ದಳದ  ತೀವ್ರ ಪ್ರತಿಷ್ಠೆಯ ಕಣವಾಗಿರುವ ಜಿಲ್ಲೆಯ ಏಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆ ಸೋಮವಾರ ನಡೆಯುತ್ತಿದ್ದು, ಜನವರಿ 18ರಂದು ಮತ ಎಣಿಕೆ ನಡೆಯಲಿದೆ. ಮತಕೇಂದ್ರದ ಸುತ್ತ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮೈಸೂರು ಜಿಲ್ಲೆಯ ಎ.ಪಿ.ಎಂ.ಸಿ ಚುನಾವಣೆ ಪ್ರಗತಿಯಲ್ಲಿ ಸಾಗಿದೆ. ಏಳು ತಾಲ್ಲೂಕುಗಳ ಒಟ್ಟು 86 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಗೆಲುವಿಗಾಗಿ 227 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯುತ್ತಿದೆ. ಮೈಸೂರು ಜಿಲ್ಲೆಯಾದ್ಯಂತ 855 ಮತಕೇಂದ್ರದಲ್ಲಿ ನಡೆಯುತ್ತಿರುವ ಚುನಾವಣೆಗೆ, ಕಾಂಗ್ರೆಸ್-ಜೆಡಿಎಸ್  ಜೊತೆ ಕೆಲವೆಡೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದಲೂ ತೀವ್ರ ಪೈಪೋಟಿ ನಡೆಯುತ್ತಿದೆ.ಜಿಲ್ಲೆಯಾದ್ಯಂತ 7 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ.

ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಹಿಡಿದು ಮತದಾರರಿಗೆ ಮತದಾನ ಮಾಡುವಂತೆ ಮನವಿ ಮಾಡುತ್ತಿರುವ ಘಟನೆ ಮೈಸೂರಿನ ಬೀರಿಹುಂಡಿ ವ್ಯಾಪ್ತಿಯ ಮಲ್ಲಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಅಭ್ಯರ್ಥಿ ಕೆ.ಪ್ರಭುಸ್ವಾಮಿ ಎನ್ನುವವರು ತಕಡಿ ಹಿಡಿದು ಮತದಾರರಿಗೆ ತಕಡಿ ಗುರುತಿಗೆ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಅಲ್ಲದೆ, ಸಾಲುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುತ್ತಿದ್ದು, ಇಲ್ಲಿ ಪ್ರಚಾರ ಮತಗಟ್ಟೆಯಿಂದ ಹೊರಗೆ ಅಭ್ಯರ್ಥಿ ಈ ರೀತಿ ವಿಶೇಷವಾಗಿ ಮನವಿ ಮಾಡಿದ್ದಾರೆ.

ಮೈಸೂರಿನ ಇಲವಾಲದ ಗುಂಗ್ರಾಲ್ ಛತ್ರದಲ್ಲಿ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಮ್ಮ ಹಕ್ಕನ್ನು ಚಲಾಯಿಸಿದರು. ಚಾಮುಂಡೇಶ್ವರಿ ಕ್ಷೇತ್ರ ಹಾಗೂ ವರುಣ ವಿಧಾನ ಸಭಾ ಕ್ಷೇತ್ರದ ಕೆಲವು ಪ್ರದೇಶಗಳನ್ನು ಒಳಗೊಂಡಿರುವ ಮೈಸೂರು ತಾಲೂಕು ಎಪಿಎಂಸಿ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿ ಕಾಂಗ್ರೆಸ್ ಸದಸ್ಯ ಕೆ.ಮರೀಗೌಡ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ನಂಜನಗೂಡು ಕ್ಷೇತ್ರವೂ ಈ ಬಾರಿ ತೀವ್ರ ಕುತೂಹಲ ಕೆರಳಿಸಿದೆ. ಕಾರಣ ವಿ.ಶ್ರೀನಿವಾಸ್ ಪ್ರಸಾದ್ ಈ ಬಾರಿ ಬಿಜೆಪಿಯನ್ನು ಸೇರಿದ್ದು, ಕಾಂಗ್ರೆಸ್ ನಲ್ಲಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಾವೇ ಪ್ರಚಾರಕಾರ್ಯ ಕೈಗೊಂಡಿದ್ದರು.

ಒಟ್ಟಿನಲ್ಲಿ ಈ ಬಾರಿಯ ಎಪಿಎಂಸಿ ಚುನಾವಣೆ ಪ್ರತಿಯೊಬ್ಬರಿಗೂ ಪ್ರತಿಷ್ಠೆಯ ಕಣವಾಗಿದ್ದು, ಕುತೂಹಲ ಮೂಡಿಸಿದೆ. ಬೆಳಿಗ್ಗೆ 8ರಿಂದ ಆರಂಭಗೊಂಡ ಮತದಾನ ಸಂಜೆ 5ರವರೆಗೆ ನಡೆಯಲಿದ್ದು, ಶಾಂತಿಯುತವಾಗಿ ನಡೆಯುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎನ್ನುವುದು ಜನವರಿ 18ರಂದು ತಿಳಿದುಬರಲಿದೆ.

Leave a Reply

comments

Related Articles

error: