
ಮೈಸೂರು
ನೀವು ಏನೇ ಕಲಿತರೂ ನಿಮ್ಮ ನೆಲದ ಸಂಸ್ಕೃತಿಯನ್ನು ಮರೆಯಬೇಡಿ : ಡಾ.ರಾಘವ ರಾವ್
ಮೈಸೂರು,ಫೆ.2:- ನೀವು ಏನೇ ಕಲಿತರೂ ನಿಮ್ಮ ನೆಲದ ಸಂಸ್ಕೃತಿಯನ್ನು ಮರೆಯಬೇಡಿ ಎಂದು ಸಿಎಫ್ ಟಿಆರ್ ಐ ನಿರ್ದೇಶಕ ಡಾ.ರಾಘವ ರಾವ್ ತಿಳಿಸಿದರು.
ಅವರಿಂದು ವಿಜ್ಞಾನಭವನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲೇಕೆಯ ಸಂಯುಕ್ತಾಶ್ರಯದಲ್ಲಿ 2018-19ನೇ ಸಾಲಿನ ರಾಜ್ಯಮಟ್ಟದ ಗಣಿತ-ವಿಜ್ಞಾನ ಒಲಂಪಿಯಾಡ್ ವಿಜೇತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ನೀವು ಇಂಗ್ಲಿಷ್ ಕಲಿಯಿರಿ ಆದರೆ ಇಂಗ್ಲಿಷರಾಗಬೇಡಿ. ಸ್ಥಳೀಯ ಭಾಷೆಗಳು ಕೂಡ ನಿಮ್ಮ ಬೆಳವಣಿಗೆಗೆ ಸಹಾಯಕವಾಗಲಿದೆ. ಏನೇ ಕಲಿತರೂ ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ಅದನ್ನು ಉಳಿಸಿ ಬೆಳೆಸಬೇಕು ಎಂದರು. ಇದೊಂದು ಅದ್ಭುತ ಕಾರ್ಯಕ್ರಮ. ಗಣಿತ ಎಲ್ಲ ವಿಷಯಗಳಂತೆ ಅಲ್ಲ. ಇದು ಆಲೋಚನಾ ಶಕ್ತಿಯನ್ನು ವೃದ್ಧಿಸುತ್ತದೆ.ಗ್ರಹಿಕೆಯ ಶಕ್ತಿಯನ್ನು ಹೆಚ್ಚಿಸುತ್ತದೆ. ಗಣಿತವನ್ನು ಗ್ರಹಿಸಿದವರು ತಂತ್ರಜ್ಞಾನ, ಜೈವಿಕಶಾಸ್ತ್ರಗಳನ್ನು, ಇತರ ವಿಷಯಗಳನ್ನು ಗ್ರಹಿಸುವುದು ಸುಲಭ. ಶ್ರೀನಿವಾಸ ರಾಮಾನುಜನ್ ಶ್ರೇಷ್ಠ ಗಣಿತಜ್ಞ. ಅವರ ಮೇಲೆ ಇದುವರೆಗೂ ನಮ್ಮ ದೇಶದಲ್ಲಿ ಒಂದು ಡಾಕ್ಯುಮೆಂಟರಿ, ಚಿತ್ರಗಳು ಬಂದಿಲ್ಲದಿರುವುದು ಬೇಸರದ ಸಂಗತಿ. ಆದರೆ ಇತ್ತೀಚೆಗೆ ಹಾಲಿವುಡ್ ನಲ್ಲಿ ಚಿತ್ರವೊಂದು ಬಂದಿದೆ ಎಂದರು. ಸಿ.ವಿರಾಮನ್ ಅವರು ಶ್ರೇಷ್ಠ ವಿಜ್ಞಾನಿ ಸಂಶೋಧನೆಯನ್ನು ಮಾಡುವ ಯುವಕರಿಗೆ ಸ್ಫೂರ್ತಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನ ಉಪಾಧ್ಯಕ್ಷ ಪ್ರೊ.ಗುರುನಂಜಯ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವೀಕ್ಷಕ ಕೆ.ಎಸ್.ರವಿಕುಮಾರ್, ಗಣಿತ ವಿಜ್ಞಾನ ಒಲಂಪಿಯಾಡ್ ರಾಜ್ಯ ಸಂಚಾಲಕ ಎನ್.ಆರ್.ಮಂಜುನಾಥ್, ಕರಾವಿಪ ಸದಸ್ಯ ರಾಮಚಂದ್ರ, ಜಂಟಿ ಕಾರ್ಯದರ್ಶಿ ಬಿ.ಎನ್.ಶ್ರೀನಾಥ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)